ಸಂಬಂಧಗಳು ಅರ್ಥವಾದರೆ ಬದುಕು ಬಾಂಬೆ ಮಿಠಾಯಿ

edite
Published on

ಶಾರೀರಿಕ ಆರೋಗ್ಯ ರಕ್ಷಣೆಗೆ ಹಲವು ಕಸರತ್ತು ಮಾಡುತ್ತೇವೆ. ಆದರೆ, ಸಂಬಂಧ ಮತ್ತು ಬಾಂಧವ್ಯದ ರಕ್ಷಣೆಗೆ ನಿಜಕ್ಕೂ ನಾವು ಪ್ರಯತ್ನ ಪಡುತ್ತಿದ್ದೇವೆಯಾ? ಬಾಂಧವ್ಯ ಮತ್ತು ಸಂಬಂಧಗಳನ್ನು ಉತ್ತಮಪಡಿಸಿಕೊಂಡಷ್ಟು ದೈಹಿಕ ಆರೋಗ್ಯ ಕೂಡ ಸುಧಾರಿಸುತ್ತದೆ ಎಂಬುದನ್ನು ಇತ್ತೀಚಿನ ಸಂಶೋಧನೆಗಳೇ ಹೇಳಿವೆ. ಭಾವನಾತ್ಮಕ ಆರೋಗ್ಯಕ್ಕೂ, ದೈಹಿಕ ಆರೋಗ್ಯಕ್ಕೂ ನೇರ ಸಂಬಂಧವಿದೆ.

 ಇತ್ತೀಚಿನ ದಿನಗಳಲ್ಲಿ ಆಟೋ ಸಾಹಿತ್ಯ ಜನಪ್ರಿಯವಾಗುತ್ತಿದೆ. ಕೆಲ ದಿನಗಳ ಹಿಂದೆ ಹೀಗೇ ಕಂಡ ಸಾಲು ಗಮನ ಸೆಳೆಯಿತು. ‘ವಸ್ತುಗಳನ್ನು ಬಳಸಿ, ಬಿಸಾಡಿ, ಪ್ರೀತಿಸಬೇಡಿ. ಮನುಷ್ಯರನ್ನು ಪ್ರೀತಿಸಿ, ಆದರೆ ಬಳಸಿ, ಬಿಸಾಡಬೇಡಿ’. ನಿಜ ಅಲ್ಲವೇ? ಇತ್ತೀಚಿನ ಜಮಾನಾದಲ್ಲಿ ಎಲ್ಲವೂ ದುಬಾರಿಯಾಗುತ್ತಿದೆ. ಅಗ್ಗವಾಗುತ್ತಿರುವುದು ಮನುಷ್ಯನ ಜೀವ ಮತ್ತು ಸಂಬಂಧಗಳು ಮಾತ್ರ. ಹಳೆಯ ಕೃತಿಯಾದರೂ ಲೇಖಕ ಲೂಯಿಸ್ ಎಲ್ ಅವರ ‘ಯು ಕ್ಯಾನ್ ಹೀಲ್ ಯುವರ್ ಲೈಫ್’ ಪುಸ್ತಕದ ಬಗ್ಗೆ ಮತ್ತೆ ಮತ್ತೆ ಚರ್ಚೆ ನಡೆಯುತ್ತದೆ. 2024ರಲ್ಲಿ ಈ ಪುಸ್ತಕ ಮರುಮುದ್ರಣಗೊಂಡಿದ್ದು, ಹಲವು ಸ್ವಾರಸ್ಯಕರ ಅಂಶಗಳ ವಿಶ್ಲೇಷಣೆ ನಡೆಯುತ್ತಿದೆ. ‘ನಮ್ಮಲ್ಲಿರುವ ಹಲವು ಕಾಯಿಲೆಗಳಿಗೆ ಶಾರೀರಿಕ ದೋಷ ಕಾರಣವಲ್ಲ. ಅವುಗಳ ರೂಟ್ ಕಾಜ್ ಭಾವನಾತ್ಮಕ ಸಮಸ್ಯೆ. ಅದು ಕಿಡ್ನಿ ಸ್ಟೋನ್, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಬೆನ್ನುನೋವು ಯಾವುದೇ ಇರಬಹುದು. ಅದಕ್ಕೆ ಮೂಲಕಾರಣ ಭಾವನಾತ್ಮಕ ಸಮಸ್ಯೆ. ಅಂದರೆ, ಹಿಂದೆ ಯಾರೋ ಹೇಳಿದ ಕಟುಮಾತು, ಎಸಗಿದ ಅವಮಾನ ಅಥವಾ ಜೀವನದಲ್ಲಿ ಸಂಭವಿಸಿದ ಕೆಟ್ಟ ಘಟನೆಗಳು ನೆಗೆಟಿವ್ ಎಮೋಷನ್ಸ್​ಗಳನ್ನು ದೀರ್ಘಾವಧಿಯವರೆಗೆ ಜೀವಂತವಾಗಿ ಇರಿಸುತ್ತವೆ. ಮತ್ತು ಈ ನಕಾರಾತ್ಮಕ ಭಾವನೆಗಳೇ ನಮ್ಮನ್ನು ಕೊರಗುವಂತೆ ಮಾಡಿ, ಕಾಯಿಲೆಗಳಿಗೆ ಆಹ್ವಾನ ನೀಡುತ್ತವೆ. ಆದರೆ, ಸಂಬಂಧ ಮತ್ತು ಬಾಂಧವ್ಯವನ್ನು ಉತ್ತಮಪಡಿಸಿಕೊಂಡವರ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬಂದಿದೆ ಎನ್ನುವ ಲೂಯಿಸ್, ಭಾವನಾತ್ಮಕ ಆರೋಗ್ಯದ ರಕ್ಷಣೆಗೆ ನಾವು ಗಮನ ಕೊಡದೆ ಹೋದಲ್ಲಿ, ದೈಹಿಕ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ.

ಹೌದು, ನಮ್ಮಲ್ಲಿ ತುಂಬ ಜನರು ಹಳೆಯ ನೋವುಗಳಿಂದ ಮನಸ್ಸನ್ನು ಭಾರವಾಗಿಸಿಕೊಂಡಿದ್ದೇವೆ. ನಮ್ಮ ಮಿದುಳಿನಲ್ಲಿಯೂ ಅಷ್ಟೇ. ಶೇಕಡ 80ರಷ್ಟು ಹಳೆಯ ಪಳೆಯುಳಿಕೆಗಳು, ಹಳೆಯ ನೆನಪುಗಳೇ ಉಳಿದುಕೊಂಡು, ನೋವನ್ನು ಜೀವಂತವಾಗಿ ಇರಿಸಿವೆ. ಆದರೆ, ಭಾವನೆಗಳನ್ನು ಅದರಲ್ಲೂ ನೋವು ತುಂಬಿದ ಭಾವನೆಗಳನ್ನು ದೀರ್ಘಾವಧಿಯವರೆಗೆ ಅದುಮಿ ಇಟ್ಟಷ್ಟು, ಅದು ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ‘ಹೇಳುವುದು ಏನೋ ಉಳಿದುಹೋಗಿದೆ...’ ಅಂತ ನಮಗೂ ಅದೆಷ್ಟೋ ಬಾರಿ ಅನಿಸುತ್ತದೆ. ಆದರೆ, ಬಿಡುಗಡೆಯ ದಾರಿಗಳನ್ನು ನಾವು ಕಂಡುಕೊಳ್ಳುವುದಿಲ್ಲ ಎಂಬುದು ಖರೆ. ಒಬ್ಬ ಯುವಕ ಮನಸ್ಸಿನ ಭಾರವನ್ನು ಹೊತ್ತು ಆಶ್ರಮಕ್ಕೆ ಬಂದು ಗುರುಗಳನ್ನು ಭೇಟಿ ಮಾಡಿದ.

‘ಮನಸ್ಸು ಗೊಂದಲದ ಗೂಡಾಗಿದೆ. ಒಳಗೆ, ಹೊರಗೆ ಎಲ್ಲೂ ಬೆಳಕು ಕಾಣುತ್ತಿಲ್ಲ. ಬದುಕಿನಲ್ಲಿ ಉತ್ಸಾಹವೇ ಇಲ್ಲ. ಹೊರಗಿನ ಒಣಮಾತುಗಳು ರುಚಿಸುತ್ತಿಲ್ಲ. ಯಾವುದರ ಹುಡುಕಾಟದಲ್ಲಿದ್ದೇನೆ ಎಂಬುದು ಸ್ಪಷ್ಟವಾಗುತ್ತಿಲ್ಲ’ ಎಂದ. ಶಿಷ್ಯನ ಮಾತುಗಳನ್ನೆಲ್ಲ ಆಲಿಸಿದ ಗುರುಗಳು, ‘ಮನಸ್ಸು ಹಾಗೂ ಮಿದುಳು ಸರಕುಗಳನ್ನು ತುಂಬಿಡುವ ಸಂಗ್ರಹಾಗಾರ ಅಲ್ಲ ಕಣಪ್ಪ. ಬದುಕಿನ ಹಳೆಯ ನೋವು, ಸಂಕಟ, ಹೇಳದೆ ಉಳಿದ ಮಾತುಗಳು, ಹಂಚಿಕೊಳ್ಳದ ಭಾವನೆಗಳು ಹೀಗೆ ಎಲ್ಲವನ್ನೂ ಗುಡ್ಡೆ ಹಾಕಿ ಅಲ್ಲಿ ಕೂಡಿಟ್ಟರೆ ಮನಸ್ಸು ಶಾಂತವಾಗಿ ಇರಲು ಹೇಗೆ ಸಾಧ್ಯ? ದೇವರು ನಮಗೆ ಮಾತು ಮತ್ತು ಮನಸ್ಸನ್ನು ಕೊಟ್ಟಿರುವುದೇ ಸಕಾಲಕ್ಕೆ ಸ್ಪಂದಿಸಲು. ಈ ಅಭಿವ್ಯಕ್ತಿಯನ್ನೇ ಮರೆತು ಕೂತಿದ್ದೇವೆ. ಆ ಮೂಲಕ ನಮ್ಮ ಅಂತರಂಗಕ್ಕೂ ಮೋಸ ಮಾಡುತ್ತಿದ್ದೇವೆ. ನಮ್ಮ ಬದುಕನ್ನು ರೂಪಿಸಿದ, ಹೆಜ್ಜೆಹೆಜ್ಜೆಗೂ ನೆರವಾದ ಜೀವಗಳಿಗೆ ಕೃತಜ್ಞತೆ ಅರ್ಪಿಸಲು ಕೂಡ ಜಾಣಮರೆವು ತೋರಿದ್ದೇವೆ. ನಿನ್ನನ್ನು ಪೊರೆಯುತ್ತಿರುವ ಭಗವಂತನಿಗೆ, ಜನ್ಮ ಕೊಟ್ಟು ಸಲುಹಿದ ತಂದೆ-ತಾಯಿಗೆ, ಸುಖ-ದುಃಖಗಳಲ್ಲಿ ಜತೆಯಾದ ಬಂಧುಬಾಂಧವರಿಗೆ ಕೃತಜ್ಞತೆ ಸಲ್ಲಿಸುವುದಾದರೂ ಯಾವಾಗ, ‘ನಾಳೆ’ ಅಂತ ಮುಂದೂಡುತ್ತ ಹೋದರೆ, ಕೊನೆಗೊಂದು ದಿನ ನಿನ್ನ ಮಾತು, ನಿನ್ನ ಭಾವನೆ ನಿನ್ನಲ್ಲಿಯೇ ಉಳಿದು ಬಿಡುತ್ತದೆ. ಹೋಗು, ಯಾರಿಗೆ ಏನೆಲ್ಲ ಹೇಳಬೇಕಾಗಿದೆಯೋ ಹೇಳು ಹೋಗು. ಯಾರಿಗೆ ಕೃತಜ್ಞತೆ ಅರ್ಪಿಸಬೇಕಿದೆ, ಯಾರಿಗೆ ಕಣ್ಣೀರು ಸಮರ್ಪಿಸಬೇಕಿದೆ, ಯಾರಿಗೆ ನಗು ಹಂಚಬೇಕಿದೆ, ಯಾರಿಗೆ ಆತ್ಮೀಯ ಅಪು್ಪಗೆ ನೀಡಬೇಕಿದೆ, ಬೆನ್ನು ತಟ್ಟಬೇಕಿದೆ, ವೆುಚ್ಚುಗೆಯ ನಾಲ್ಕು ಮಾತುಗಳನ್ನು ಹೇಳಬೇಕಿದೆ... ಅದೆಲ್ಲ ಹೇಳಿ ಬಿಡು. ಹೀಗೆ ಮಾಡುತ್ತ ಮಾಡುತ್ತ ಒಂದೊಂದು ಹೆಜ್ಜೆಯಲ್ಲೂ ಮನಸ್ಸಿನ ಭಾರ ಇಳಿಯುತ್ತ ಹೋಗುತ್ತದೆ, ಅಂತರಂಗವೂ ಪ್ರೀತಿ, ಸಕಾರಾತ್ಮಕತೆಯಿಂದ ಅರಳುತ್ತದೆ. ಆಗ ಬದುಕಿಗೆ ಹೊಸ ಅರ್ಥ ಸಿಗುತ್ತದೆ, ಸಾಗಬೇಕಾದ ದಾರಿಯೂ ಗೋಚರಿಸುತ್ತದೆ’ ಎಂದು ಹೇಳುವ ಮೂಲಕ ಶಿಷ್ಯನ ಅಂತರಂಗದ ಕಣ್ಣನ್ನು ತೆರೆಸಿದರು.

ಹೌದು, ಎಂಥ ವೈಚಿತ್ರ್ಯ ಮತ್ತು ವಿಪರ್ಯಾಸ ನೋಡಿ. ಮಾತು ಎಂಬುದು ಮನುಷ್ಯನಿಗೆ ದೊರೆತಿರುವ ಅದ್ಭುತ ಶಕ್ತಿಯಾದರೂ ಹೇಳಬೇಕಾದ್ದನ್ನು ಹೇಳಲಾಗದೆ ಆತ ಒದ್ದಾಡುತ್ತಿದ್ದಾನೆ. ತನಗೆ ಗೊತ್ತಿಲ್ಲದಂತೆ ಒಂಟಿತನದ ದ್ವೀಪದಲ್ಲಿ ಬಂಧಿಯಾಗುತ್ತಿದ್ದಾನೆ. ಇದು ನಮ್ಮ ನಮ್ಮ ಮನೆಗಳಿಂದ ಹಿಡಿದು, ಪಕ್ಕದ ಹಳ್ಳಿ ಏಕೆ, ಜಗತ್ತಿನ ಮುಂದುವರಿದ ದೇಶಗಳಿಗೂ, ಮಾಡರ್ನ್ ಅಂತ ಅಂದುಕೊಂಡಿರುವ ಮನಸ್ಸುಗಳಿಗೂ ವ್ಯಾಪಿಸಿಕೊಂಡಿರುವ ಸಮಸ್ಯೆ. ಬೇಕಿದ್ದರೆ ಪರೀಕ್ಷಿಸಿ ನೋಡಿ. ಜೀವನದ ಸಂಧ್ಯಾಕಾಲದಲ್ಲಿ ಇರುವ ವ್ಯಕ್ತಿಯನ್ನೋ, ತಾರುಣ್ಯದ ಹೊಸ್ತಿಲಲ್ಲಿ ಇರುವ ಯುವಕ, ಯುವತಿಯನ್ನೋ, ಮಧ್ಯವಯಸ್ಸಿನ ಗೃಹಿಣಿ, ಉದ್ಯೋಗಿಯನ್ನೋ ಕೂರಿಸಿಕೊಂಡು ಕೇಳಿದರೆ ಅವರು ಈವರೆಗೆ ಹೇಳಬೇಕಾಗಿದ್ದನ್ನು ಹೇಳಿಲ್ಲ, ಹೇಳುವುದು ಸಾಕಷ್ಟಿದ್ದರೂ ಅದು ಹೊರಹಾಕುವ ದಾರಿ ತೋಚುತ್ತಿಲ್ಲ ಎನ್ನುತ್ತಾರೆ. ಅಥವಾ ‘ನಾಳೆ ಹೇಳಿದರಾಯಿತು...’ ಅಂತ ಮನಸ್ಸಿಗೆ ಹುಸಿ ಸಮಾಧಾನ ಮಾಡಿಕೊಳ್ಳುತ್ತಾರೆ.

ಹಾಗೆ ನೋಡಿದರೆ ಬೆಳಗ್ಗೆ ಎದ್ದು ಕಣ್ಣು ತೆರೆದಾಕ್ಷಣದಿಂದ ರಾತ್ರಿ ನಿದ್ದೆಗೆ ಜಾರುವವರೆಗೆ ಮಾತು, ಮಾತು! ನಮ್ಮ ದಿನಚರಿಯಲ್ಲಿ ಬಹುಪಾಲು ಮಾತು ವ್ಯಾಪಿಸಿಕೊಳ್ಳುತ್ತದೆ. ಆದರೆ, ಇದ್ಯಾವವೂ ಮನಸ್ಸಿನ ಮಾತುಗಳಲ್ಲ, ವ್ಯಾವಹಾರಿಕ ಮಾತುಗಳು. ಹಾಗಾಗಿಯೇ, ಈ ಮಾತುಗಳು ಖುಷಿ ಅಥವಾ ಸಾಂತ್ವನ ನೀಡುವುದಿಲ್ಲ. ಇನ್ನು ಕೆಲವರಂತೂ, ಅಂತರಂಗಕ್ಕೆ ಸದಾ ಡಿಸ್​ಕನೆಕ್ಟ್ ಆಗಿಯೇ ಸುಮ್ಮನೇ ಮಾತನಾಡುತ್ತಿರುತ್ತಾರೆ. ಅಂಥವರ ಮಾತಿಗೆ ಯಾವ ಗಾಂಭಿರ್ಯವೂ, ಘನತೆಯೂ ಇರುವುದಿಲ್ಲ, ಸಂವೇದನೆಯ ಲೇಪ ಇರುವುದಿಲ್ಲ. ಇನ್ನು ಕೆಲವೊಬ್ಬರ ಮಾತು ಕೇಳುತ್ತಲೇ ಇರಬೇಕು ಎನಿಸುತ್ತದೆ, ಏಕೆಂದರೆ ಅವರು ಕೃತಕವಾಗಿ ಮಾತನಾಡುವುದಿಲ್ಲ, ಮಾತನಾಡಬೇಕು ಅಂತ ಮಾತನಾಡುವುದಿಲ್ಲ. ಆಂತರ್ಯದಲ್ಲಿ ನೆಲೆಸಿರುವ ಶುದ್ಧ ಭಾವನೆಗಳಿಗೆ ಮಾತಿನ ರೂಪವನ್ನು ಕೊಟ್ಟು, ಇತರರ ಅಂತರಂಗವನ್ನು ಬಡಿದೆಬ್ಬಿಸುತ್ತಾರೆ, ಬದುಕು ಸಾಗುತ್ತಿರುವ ದಿಕ್ಕಿನ ಬಗ್ಗೆ ಯೋಚಿಸುವಂತೆ ಮಾಡುತ್ತಾರೆ.

ಹಾಗಾಗಿಯೇ, ಹಿರಿಯರು ಹೇಳುತ್ತಿದ್ದರು. ‘ಶಬ್ದಗಳನ್ನು ಹೇಗೇಗೋ ಖರ್ಚು ಮಾಡಬಾರದು. ನಾಲಿಗೆಯಲ್ಲಿ ಸರಸ್ವತಿ ನೆಲೆಸಿರುವುದರಿಂದ ಸದಾ ಒಳಿತನ್ನೇ, ಹಿತವಾದದ್ದನ್ನೇ ಮಾತನಾಡಬೇಕು’ ಅಂತ. ಆದರೆ, ಎಷ್ಟೋ ಜನರಿಗೆ ಇದೆಲ್ಲ ಹುಚ್ಚು ಆದರ್ಶ ಎನಿಸಿಬಿಡುತ್ತದೆ. ಸಮಾಜದಲ್ಲಿ ‘ಪ್ರಬುದ್ಧ’ರೆನಿಸಿಕೊಂಡವರು ಕೂಡ ಎಷ್ಟೋ ಬಾರಿ ಏನೇನೋ ಮಾತನಾಡಿ, ವಿವಾದಕ್ಕೆ ಸಿಲುಕಿಕೊಳ್ಳುವುದನ್ನು ನೋಡಿದ್ದೇವೆ. ಮಾತಿನ ಶಕ್ತಿಯನ್ನು ಮರೆತು ಅದನ್ನು ಬೇಕಾಬಿಟ್ಟಿಯಾಗಿ ಬಳಸತೊಡಗಿದಾಗ ಇಂಥ ಅಪಸವ್ಯಗಳು ಕಂಡುಬರುತ್ತವೆ. ಆದರೆ, ಮಾತಿನ ನಿಜವಾದ ಮೌಲ್ಯ, ಅದರ ಶಕ್ತಿಯನ್ನು ಅರಿತುಕೊಂಡಾಗ ಅದುವೇ ‘ಸತ್ಸಂಗ’ವಾಗುತ್ತದೆ. ನಮ್ಮ ಬದುಕನ್ನು ಮಾತ್ರವಲ್ಲ ಇತರರ ಬಾಳಿನಲ್ಲೂ ಭರವಸೆಯ ತಂಗಾಳಿಯನ್ನು ತರುತ್ತದೆ.

ಮುಂಚೆಯೆಲ್ಲ ಅಭಿವ್ಯಕ್ತಿಗೆ ಸೀಮಿತ ಸಾಧನಗಳಿದ್ದವು. ಈಗ ಹಾಗಿಲ್ಲ. ಸಾಮಾಜಿಕ ಮಾಧ್ಯಮಗಳ ಅಬ್ಬರ, ಕೈಗೆಟಕುವ ತಂತ್ರಜ್ಞಾನ ಎಲ್ಲ ನಮ್ಮ ಬಳಿ ಇದ್ದರೂ ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ. ಅರ್ಥ ಮಾಡಿಕೊಂಡರೂ ಅದನ್ನು ಅಭಿವ್ಯಕ್ತಿಸಲು ಸಾಧ್ಯವಾಗುತ್ತಿಲ್ಲ. ಈ ಅಂಶವನ್ನು ಇನ್ನೂ ಸ್ಪಷ್ಟವಾಗಿ ಹೇಳಬೇಕು ಎಂದರೆ, ಒಬ್ಬ ವ್ಯಕ್ತಿ ತನ್ನ ಕುಟುಂಬಕ್ಕೆ, ಸಂಸ್ಥೆಗೆ, ಸಮಾಜಕ್ಕೆ ಹೀಗೆ ತನ್ನ ಸಂಪರ್ಕಕ್ಕೆ ಬಂದ ಎಲ್ಲರೊಂದಿಗೂ ಹಿತಕಾರಿಯಾಗಿ ನಡೆದುಕೊಂಡಿರುತ್ತಾನೆ. ಅಷ್ಟೇ ಅಲ್ಲ, ಆತ ಅಥವಾ ಆಕೆ ತನ್ನ ಕೌಶಲ, ಜ್ಞಾನ ಮತ್ತು ಸಂವೇದನೆಯ ಶಕ್ತಿಯಿಂದ ಸಾಕಷ್ಟು ಒಳಿತನ್ನು ಮಾಡಿರುತ್ತಾರೆ. ಇತರರಿಗೆ ಸ್ಪಂದಿಸಿ, ಕಷ್ಟಗಳನ್ನು ದೂರ ಮಾಡಿರುತ್ತಾರೆ. ವಿಪರ್ಯಾಸ ಎಂದರೆ, ಎಲ್ಲೋ ಒಂದು ಹಂತದಲ್ಲಿ ಹೀಗೆ ಎಲ್ಲರಿಗೂ ದುಡಿದವರು, ಎಲ್ಲರಿಗೂ ಮಿಡಿದವರು ಸಹ ಒಂಟಿತನ, ಭಾವನಾತ್ಮಕ ಅಸುರಕ್ಷತೆ ಎದುರಿಸುತ್ತಾರೆ. ‘ನನಗೆ ಯಾರೂ ಇಲ್ಲ’ ಎಂಬ ಭಾವ ಆವರಿಸಿಕೊಳ್ಳುತ್ತ ಹೋಗಿ, ಇಷ್ಟು ವರ್ಷಗಳ ಕಾಲ ಯಾರಿಗಾಗಿ ಏನೆಲ್ಲ ಮಾಡಿದೆ, ಅವರೆಲ್ಲ ಎಲ್ಲಿ ಹೋದರು, ಯಾಕೆ ದೂರವಾದರು, ಮಾತುಗಳು ಏಕೆ ನಿಂತುಹೋದವು ಎಂದು ಆಲೋಚಿಸತೊಡಗುತ್ತಾರೆ. ಇದು ಕೂಡ ಪ್ರತಿ ಮನೆಯ ಕಥೆ ಮತ್ತು ವ್ಯಥೆ. ಈ ಸಮಸ್ಯೆ ಇಷ್ಟು ಬೃಹದಾಕಾರವಾಗಿ ಬೆಳೆಯಲು ಕಾರಣವೇ ಸ್ಪಂದನೆಯ ಕೊರತೆ. ಅಂತಃಕರಣದ ಕೊರತೆ.

ಸಮಾಜದಲ್ಲಿ ಸ್ಥಿತಿ ಯಾವ ಮಟ್ಟಿಗೆ ತಲುಪಿದೆ ಎಂದರೆ ಆತ ಅಥವಾ ಆಕೆ ಮೆಚ್ಚುಗೆಯ ನಾಲ್ಕು ಮಾತುಗಳನ್ನು ಕೇಳುವುದು ಸತ್ತ ಬಳಿಕವೇ ಎಂಬುದು ಕಟುವಾಸ್ತವ! ‘ಅಯ್ಯೋ ಅವರೆಷ್ಟು ಒಳ್ಳೆಯವರು, ನಮಗಾಗಿ ಏನೆಲ್ಲ ಮಾಡಿದರು’ ಎಂದು ನೆನಪಿಸಿಕೊಳ್ಳುವುದು ಅವರು ನಮ್ಮಿಂದ ದೂರವಾದ ಮೇಲೆಯೇ. ಅದಕ್ಕೆ, ಆರಂಭದಲ್ಲಿ ಪ್ರಸ್ತಾಪಿಸಿದ್ದು, ಮನಸ್ಸಿನ ಮಾತುಗಳನ್ನು ಇಂದೇ ಹೇಳಬೇಕು. ‘ನಾಳೆ’ ಎಂಬುದಕ್ಕೆ ಯಾವುದೇ ಭರವಸೆ ಇಲ್ಲ. ಅದಕ್ಕೆಂದೆ, ವಿದೇಶಗಳಲ್ಲಿ ಬದುಕಿರುವಾಗಲೇ ‘ಶ್ರದ್ಧಾಂಜಲಿ ಸಭೆ’ಗಳು ಶುರುವಾಗಿವೆ. ‘ನಾನೇ ಹೋದ ಬಳಿಕ ನೀನು ನನ್ನ ಬಗ್ಗೆ ಏನೇ ಹೇಳಿದರೂ ಏನು ಪ್ರಯೋಜನ? ಹೇಳುವುದೇನಿದ್ದರೂ ಈಗಲೇ ಹೇಳು’ ಎಂಬ ಭಾವ ಇಂಥ ಸಭೆಗಳಲ್ಲಿ ತುಂಬಿಕೊಂಡಿದೆ. ಕೆಲ ಸಿನಿಮಾಗಳಲ್ಲೂ ಇಂಥ ದೃಶ್ಯಗಳನ್ನು ಕಂಡಿದ್ದೇವೆ.

ಜೀವನ ಎಂದರೆ ಅಲ್ಲಿ ನೋವು, ನಲಿವು, ನಗು, ಅಳು ಎಲ್ಲವೂ ಇದ್ದಿದ್ದೆ. ಆದರೆ, ಈ ಚೇತೋಹಾರಿ ಪಯಣದಲ್ಲಿ ನಮ್ಮ ಸಂಪರ್ಕಕ್ಕೆ ಅಸಂಖ್ಯ ಜನರು ಬಂದಿರುತ್ತಾರೆ. ನಮ್ಮ ಶಾಸ್ತ್ರಗಳು ಇದನ್ನೇ ‘ಋಣ’ ಎಂದು ಕರೆದಿವೆ. ಮತ್ತು ಯಾರೂ ಸುಖಾಸುಮ್ಮನೆ, ಕಾರಣವಿಲ್ಲದೆ ನಮ್ಮ ಸಂಪರ್ಕಕ್ಕೆ ಅಥವಾ ನಾವು ಇತರರ ಸಂಪರ್ಕಕ್ಕೆ ಬರುವುದಿಲ್ಲ. ಇದಕ್ಕೆ ಹಿಂದಿನ ಜನ್ಮದ ಕರ್ಮವೃತ್ತಾಂತಗಳು ಕಾರಣವಾಗಿ ಇರುತ್ತವೆ. ಹಾಗಾಗಿ, ಈ ಜನ್ಮದಲ್ಲಾದರೂ ಆ ‘ಋಣ’ವನ್ನು ತೀರಿಸಿಕೊಳ್ಳಬೇಕೆ ಹೊರತು, ಅದನ್ನು ಮತ್ತೊಂದು ಜನ್ಮಕ್ಕೆ ಕೊಂಡೊಯ್ಯಬಾರದು ಎಂಬ ಅಧ್ಯಾತ್ಮ ಸಾಧಕರ ಉಪದೇಶ ತುಂಬ ಅರ್ಥಗರ್ಭಿತವಾದದ್ದು. ಈ ‘ಋಣ’ ತೀರಿಸುವುದು ಎಂದರೆ ನಾವು ನಮ್ಮ ಸಂಪರ್ಕಕ್ಕೆ ಬಂದವರ ಜತೆ ಪ್ರೀತಿ, ವಾತ್ಸಲ್ಯ, ವಿಶ್ವಾಸದಿಂದ ವರ್ತಿಸುವುದೇ ಆಗಿದೆ. ಆದರೆ, ನಾವೆಲ್ಲ ವ್ಯಾವಹಾರಿಕ ಅಥವಾ ಭೌತಿಕ ಪ್ರಪಂಚದಲ್ಲಿ ಎಷ್ಟು ಮುಳುಗಿ ಹೋಗಿದ್ದೇವೆ ಎಂದರೆ ಉಪಕಾರ ಸ್ಮರಣೆಯನ್ನೇ ಮರೆತು ಬಿಟ್ಟಿದ್ದೇವೆ, ಹೇಳಬೇಕಾದ್ದನ್ನು ಹೇಳದೆ ಕಾಲ ದೂಡುತ್ತಿದ್ದೇವೆ. ಮಾತುಗಳ, ಸಂವೇದನೆಗಳ ಶಕ್ತಿಯನ್ನು ಅರಿತುಕೊಳ್ಳಲು ವಿಫಲರಾಗಿದ್ದೇವೆ. ಅದಕ್ಕೆಂದೆ ಅಭಿವ್ಯಕ್ತಿಯನ್ನು ಸರಳಗೊಳಿಸಲು ಹೊಸ ವಿಧಾನಗಳತ್ತ ಮೊರೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ.

Harvard study of adult development ಅಧ್ಯಯನ ವರದಿ ಕೂಡ, ಸಂಬಂಧ, ಬಾಂಧವ್ಯದಲ್ಲೇ ನಿಜವಾದ ಸಂತೋಷವಿದೆ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದೆ. ಸಮೀಪದ ಸಂಬಂಧಗಳೇ ಮನುಷ್ಯನನ್ನು ಖುಷಿಯಾಗಿ ಇರಿಸುತ್ತವೆ, ಮಾನಸಿಕ ಒತ್ತಡದಿಂದ, ಋಣಾತ್ಮಕ ಯೋಚನೆಗಳಿಂದ ಮುಕ್ತಗೊಳಿಸಿ, ಭಾವನಾತ್ಮಕ ರಕ್ಷಣೆಯನ್ನು ಒದಗಿಸುತ್ತವೆ ಎಂದಿರುವ ವರದಿ ಸಂಬಂಧಗಳನ್ನು ಕಾಯ್ದುಕೊಳ್ಳುವುದು ಹಾಗೂ ಅದನ್ನು ಉತ್ತಮ ಪಡಿಸಿಕೊಳ್ಳುವುದು ಕೂಡ ನಮ್ಮನ್ನು ನಾವು ಆರೈಕೆ ಮಾಡುವ ವಿಧಾನಗಳಲ್ಲಿ ಒಂದಾಗಿದೆ. ವೈವಾಹಿಕ ಜೀವನ ಮತ್ತು ಸಮೃದ್ಧ ಪರಿವಾರವು ಸಮಾಜದೊಂದಿಗೆ ಸ್ನೇಹವನ್ನು ಗಟ್ಟಿಗೊಳಿಸಿ, ಸಂತೃಪ್ತ ಭಾವವನ್ನು ನೀಡುತ್ತದೆ ಎಂದಿದೆ.

‘ತ್ಯಾಗ ಪ್ರೀತಿಗಿಂತಲೂ ದೊಡ್ಡದು. ಗುಣ ಸೌಂದರ್ಯಕ್ಕಿಂತಲೂ ದೊಡ್ಡದು. ಮಾನವೀಯತೆ ಹಣಕ್ಕಿಂತಲೂ ದೊಡ್ಡದು. ಸಂಬಂಧಗಳು ಇವೆಲ್ಲವನ್ನೂ ಮೀರಿದ್ದು’ ಎಂಬ ಮಾತು ಸಂಬಂಧಗಳ ಸೌಧ ಎಷ್ಟು ಗಟ್ಟಿಯಾಗಿ ಇರಬೇಕು ಎಂಬುದನ್ನು ಸೂಚಿಸುತ್ತದೆ. ್ಟ್ಝಠಿಜಿಟ್ಞಠಜಜಿಟ ಎಂಬ ಶಿಪ್​ನಲ್ಲಿ (ಹಡಗು) ನಾವೆಲ್ಲ ಪ್ರಯಾಣಿಕರೇ. ದೊಡ್ಡ ಅಲೆಗಳು ಬಂದರೂ, ಹಡಗು ಸಮತೋಲನ ಕಾಯ್ದುಕೊಂಡು ಮುಂದೆ ಹೋಗುತ್ತದೆ. ಆದರೆ, ಕೆಲವೊಮ್ಮೆ ವೇಗವಾಗಿ ಬೀಸುವ ಗಾಳಿಗೆ ಹೊಯ್ದಾಡಿ, ಅಪಾಯಕ್ಕೆ ಸಿಲುಕುತ್ತದೆ. ಅಲೆಯನ್ನೂ, ಗಾಳಿಯನ್ನೂ ಎದುರಿಸುವಷ್ಟು ನಮ್ಮ ಸಂಬಂಧ, ಬಾಂಧವ್ಯಗಳು ದೃಢಗೊಳ್ಳಲಿ. ಭಾವನಾತ್ಮಕ ಆರೋಗ್ಯದ ರಕ್ಷಣೆ ನಿತ್ಯಮಂತ್ರವಾಗಲಿ. ಇನ್ನೂ ತಡಮಾಡದೆ ಭಾವನೆಗಳನ್ನು ಮಾತುಗಳ ಮೂಲಕವೋ, ಬರಹದ ಮೂಲಕವೋ ಹಂಚಿಕೊಳ್ಳಿ. ಅದರಿಂದ ಮನಸ್ಸು ಚಿಂತೆಯಿಂದ ಮುಕ್ತ, ಮುಕ್ತ! ಸಿಗುವ ನಿರಾಳತೆಯೂ ಅನನ್ಯ.

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net