ಎನ್‌ಇಪಿ ರದ್ದುಪಡಿಸಿದರೆ ಮಕ್ಕಳು, ಪಾಲಕರ ಜತೆಗೆ ಬೃಹತ್ ಆಂದೋಲನ

Basavaraj Bommai
Published on

ಬೆಂಗಳೂರು: ರಾಷ್ಟ್ರೀಯ ನೂತನ ಶಿಕ್ಷಣ ನೀತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಮಾಲೆ ಕಣ್ಣಿನಿಂದ ನೋಡುವ ಬದಲು ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ, ನಿರ್ಧಾರ ಮರು ವಿಮರ್ಶಿಸಬೇಕು. ಇಲ್ಲವಾದರೆ ಮಕ್ಕಳು, ಪಾಲಕರ ಹಾಗೂ ಶಿಕ್ಷಣಸಂಸ್ಥೆಗಳ ಜತೆಗೆ ಬಿಜೆಪಿ ದೊಡ್ಡ ಆಂದೋಲನ ಮಾಡುವುದು ಅನಿವಾರ್ಯವಾಗಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣದ ನಂತರ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ರಾಜ್ಯದ ಉನ್ನತ ಶಿಕ್ಷಣದಲ್ಲಿ ಜಾರಿಗೆ ತಂದ ಎನ್‌ಇಪಿ ರದ್ದುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ ರಾಜಕೀಯಪ್ರೇರಿತವಾಗಿದೆ. ರಾಜಕಾರಣಕ್ಕಾಗಿ ಮಕ್ಕಳ ಭವಿಷ್ಯವನ್ನು ಕಡೆಗಣಿಸುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾದ ನೀತಿ ರೂಪುಗೊಂಡಿದೆ. ಎನ್‌ಇಪಿ ಕರಡು ಪ್ರಸ್ತಾವನೆಗೆ 2013-18ರ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಪ್ಪಿಗೆ ನೀಡಿತ್ತು. ಕರ್ನಾಟಕದ ಶಿಕ್ಷಣ ನೀತಿ ರಚಿಸಿದ್ದ ಡಾ.ಕಸ್ತೂರಿರಂಗನ್ ಅವರೇ ದೇಶದ ಶಿಕ್ಷಣ ನೀತಿ ರೂಪಿಸಿದ್ದಾರೆ ಎಂದು ತಮ್ಮ ನಿಲುವು ಸಮರ್ಥಿಸಿಕೊಂಡರು.

ಇಡೀ ದೇಶದಲ್ಲಿ ಇರುವ ವ್ಯವಸ್ಥೆ ನಮ್ಮ ರಾಜ್ಯದಲ್ಲಿ ಇಲ್ಲದಿದ್ದರೆ ನಮ್ಮ ಮಕ್ಕಳು ಪೈಪೋಟಿ ಎದುರಿಸುವುದು ಹೇಗೆ ?. ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟವಾಡುವುದು ಸರಿಯಲ್ಲ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹಿನ್ನಡೆಯಾಗಲಿದೆ ಎಂದು ಬೊಮ್ಮಾಯಿ ಕಳವಳ ವ್ಯಕ್ತಪಡಿಸಿದರು.

ಖಂಡನೀಯ

ಬಿಜೆಪಿಗೆ ಮತ ಕೊಡುವವರು ರಾಕ್ಷಸರು ಎಂಬ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಹೇಳಿಕೆ ಖಂಡನೀಯ. ದೇಶದ ನಾಗರಿಕರಿಗೆ ಮಾಡಿದ ಈ ಅಪಮಾನವನ್ನು ದೇಶದ ಪ್ರತಿಯೊಬ್ಬ ನಾಗರಿಕರು ಖಂಡಿಸಬೇಕು ಎಂದರು.

ಕಾಂಗ್ರೆಸ್ ಪಕ್ಷವೇನು ತೊಳೆದ ಮುತ್ತೆ ?. ಅಲ್ಲಿ ಎಲ್ಲರೂ ಹರಿಶ್ಚಂದ್ರರೇ ಇದ್ದಾರಾ ? 75 ವರ್ಷಗಳ ಇತಿಹಾಸ, ದಾಖಲೆಗಳನ್ನು ಪರಿಶೀಲಿಸಿದರೆ ಅತ್ಯಂತ ಭ್ರಷ್ಟ, ಜನವಿರೋಧಿ ಸರ್ಕಾರಗಳನ್ನು ಜನರು ಕಂಡುಂಡಿರುವುದು ವೇದ್ಯವಾಗುತ್ತದೆ. ಕಾಂಗ್ರೆಸ್‌ನ ಎಷ್ಟು ನಾಯಕರು ಜೈಲಿನಲ್ಲಿದ್ದಾರೆ, ಕೇಸ್‌ಗಳನ್ನು ಎದುರಿಸುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದು ಕಿಡಿಕಾರಿದರು.

ಬಿಜೆಪಿ ಆಡಳಿತಾವಧಿಯಲ್ಲಿನ ಕಾಮಗಾರಿಗಳ ಬಗ್ಗೆ ತನಿಖೆಯಾಗಿ ಏನೂ ಇಲ್ಲವೆಂದು ತಿಳಿದು ಮತ್ತೊಮ್ಮೆ ತನಿಖೆ ನಡೆಸುತ್ತಿದ್ದು, ರಾಜಕೀಯಪ್ರೇರಿತ ತನಿಖೆ ನಡೆಯುತ್ತಿವೆ. ತಪ್ಪು ಪತ್ತೆ ಹಚ್ಚಲಿ, ಯಾರೇ ತಪ್ಪಿತಸ್ಥರಿದ್ದರೂ ಶಿಕ್ಷೆಯಾಗಲಿ. ತನಿಖೆ ಹೆಸರಿನಲ್ಲಿ ತಿಂಗಳುಗಟ್ಟಲೇ ಚೌಕಾಶಿ ಮಾಡಲು ಉಪಯೋಗಿಸುವುದು ಎಷ್ಟು ಸರಿ ? ಎಂಬುದನ್ನು ಕಾಂಗ್ರೆಸ್ ನಾಯಕರು ಕೇಳಿಕೊಳ್ಳಬೇಕು ಎಂದು ಬೊಮ್ಮಾಯಿ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net