ಅಗತ್ಯಬಿದ್ದರೆ ಮೀಸಲು ಪ್ರಮಾಣ ಶೇ.50 ದಾಟುವ ತೀರ್ಮಾನ

parmeshwar
Published on

ಬೆಂಗಳೂರು: ಜಾತಿ ಜನಗಣತಿ, ಪರಿಶಿಷ್ಟ ಜಾತಿ ಒಳ ಮೀಸಲಾತಿ, ಪಂಚಮಸಾಲಿ ಸಮುದಾಯದ ಪ್ರತ್ಯೇಕ ಮೀಸಲು ಬೇಡಿಕೆಗಳನ್ನು ಸರಿದೂಗಿಸುವ, ಎಲ್ಲವನ್ನು ಸರಿಪಡಿಸುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕಿದೆ. ಅಗತ್ಯಬಿದ್ದರೆ ಮೀಸಲು ಪ್ರಮಾಣ ಶೇಕಡ 50 ದಾಟುವ ತೀರ್ಮಾನವನ್ನು ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಬೇರೆ ಕೆಲವು ರಾಜ್ಯಗಳು ಮೀಸಲು ಮಿತಿ ಶೇ.50 ಮೀರಿ ಕೊಟ್ಟಿರುವುದಿದೆ. ನೆರೆಯ ತಮಿಳುನಾಡು ಶೇ.69ಕ್ಕೆ ಮೀಸಲು ಹೆಚ್ಚಳವನ್ನು ಕಾನೂನಾತ್ಮಕವಾಗಿ ನಿರ್ಧರಿಸಿ, ಸಂವಿಧಾನದ ಷೆಡ್ಯೂಲ್ 9ಕ್ಕೆ ಸೇರಿಸಲು ಶಿಫಾರಸು ಮಾಡಿದೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಗಂಭೀರ ಚಿಂತನೆ, ಚರ್ಚೆ ನಡೆಸಿದೆ ಎಂದರು.

ವಿವಿಧ ಸಮುದಾಯಗಳ ಮೀಸಲು ಏರಿಕೆ ಮನವಿಯನ್ನು ಪುರಸ್ಕರಿಸಲು ಇದು ಅನಿವಾರ್ಯವೂ ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತೃತವಾಗಿ ಸಮಾಲೋಚಿಸಲು ಸರ್ಕಾರ ಯೋಚಿಸಿದ್ದು, ಅವಶ್ಯಕತೆ ಕಂಡುಬಂದರೆ ಶೇ.50ರ ಮಿತಿ ಮೀರುವ ನಿರ್ಧಾರ ಕೈಗೊಳ್ಳಲಿದೆ ಎಂಬ ಸುಳಿವು ನೀಡಿದರು.

ವರದಿ ಮುಂದಿಡುವುದು ನಮ್ಮ ಕರ್ತವ್ಯ

ಜಾತಿ ಜನಗಣತಿ ಸಮೀಕ್ಷಾ ವರದಿ ಜನರ ಮುಂದಿಡುವುದು ಸರ್ಕಾರದ ಕರ್ತವ್ಯವಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. 160 ಕೋಟಿ ರೂ ಖರ್ಚು ಮಾಡಿ ವರದಿ ತರಿಸಿಕೊಂಡಿದ್ದೇವೆ. ವರದಿಯಲ್ಲಿ ಏನಿದೆ ಎಂದು ಜನರಿಗೆ ಗೊತ್ತಾಗಬೇಕು. ಹಾಗೆಯೇ ಮುಚ್ಚಿಟ್ಟರೆ ಜನರಿಗೆ ಸಂಶಯ ಉಂಟಾಗುತ್ತದೆ. 160 ಕೋಟಿ ರೂ ಖರ್ಚು ಮಾಡಿರುವುದು ವ್ಯರ್ಥವಾಗಲಿದೆ ಎಂದು ಸಮಜಾಯಿಷಿ ನೀಡಿದರು.

ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತು ಸಾಧಕ-ಬಾಧಕ ಚರ್ಚಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು, ಚರ್ಚಿಸಿ ನಿರ್ಧಾರ ಹಾಗೂ ಜಾರಿಗೊಳಿಸುವುದು ಎರಡು ಬೇರೆಯೇ ಆಗಿವೆ ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net