ಸಚಿವ ಬೈರತಿ ಸುರೇಶ್ ಬಂಧಿಸಿದರೆ ಮುಡಾ ಕಡತ ರಹಸ್ಯ ಬಯಲು: ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ

IMG_20241019_114904
Published on

ಬೆಂಗಳೂರು: ನಗರಾಭಿವೃದ್ಧಿ ಮಂತ್ರಿ ಬೈರತಿ ಸುರೇಶ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಮೈಸೂರು ನಗರಾಭಿವೃದ್ಧಿ ಕಡತಗಳ ರಹಸ್ಯ ಬಯಲಾಗಲಿದೆ. ಮುಡಾ ಕಚೇರಿಯಿಂದ ಎಷ್ಟು ಕಡತಗಳನ್ನು ಹೊತ್ತುಕೊಂಡು ಬಂದರು, ಎಲ್ಲಿ ಸುಟ್ಟು ಹಾಕಿದರು ಎನ್ನುವುದು ತಿಳಿಯಲು ತನಿಖಾ ಸಂಸ್ಥೆಗಳು ಅವರನ್ನು ಕೂಡಲೇ ಬಂಧಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಲಭ್ಯ ಮಾಹಿತಿ ಪ್ರಕಾರ ಅಕ್ರಮ ಹೊರ ಬಂದ ನಂತರ ಮುಡಾ ಕಚೇರಿಗೆ ತರಾತುರಿಯಲ್ಲಿ ಬೈರತಿ ಸುರೇಶ್ ತೆರಳಿದ್ದರು. 1997ರಿಂದ ಕಚೇರಿಯಲ್ಲಿದ್ದ ಕಡತಗಳನ್ನು ಎತ್ತಿಕೊಂಡು ಬಂದು, ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿದರು.

ಶುದ್ಧರಾಮಯ್ಯ ಎಂದು ಹೇಳಿಕೊಳ್ಳುತ್ತಿದ್ದ‌ ಸಿದ್ದರಾಮಯ್ಯ ಅವರ ಮುಖವಾಡ ಕಳಚಿ ಬಿದ್ದಿದೆ. ಒಂದಲ್ಲ ಮೂರು ಪ್ರಕರಣಗಳು ಭ್ರಷ್ಟಾಚಾರ ಬಯಲುಗೊಳಿಸಿವೆ. ಅಷ್ಟೇ ಅಲ್ಲ ಹೈಕೋರ್ಟ್ , ಅಧೀನ ನ್ಯಾಯಾಲಯಗಳಿಂದ ಛೀಮಾರಿ ಹಾಕಿವೆ. ತನಿಖೆಗೂ ಆದೇಶಿಸಿರುವ ಕಾರಣ ಅವರೀಗ ಅಪರಾಧಿ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ಮಾಡಿದರು.

ರಾಜಿರಹಿತ ಹೋರಾಟ

ಸ್ವತಃ ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರ ಮುಳುಗೆದ್ದಿರುವ ಕಾರಣ ಸಿಎಂ ಸಿದ್ದರಾಮಯ್ಯ ರಕ್ಷಣೆಗೆ ನಿಂತಿದೆ. ವಿದೇಶ ಪ್ರವಾಸದಲ್ಲಿ ಭಾರತೀಯರಿಗೆ ನೈತಿಕತೆ, ಪಾರದರ್ಶಕತೆ‌ ಬಗ್ಗೆ ರಾಹುಲ್ ಗಾಂಧಿ ಪಾಠ ಹೇಳುತ್ತಾರೆ. ರಾಜ್ಯದ ಸಿಎಂ ಸಿದ್ದರಾಮಯ್ಯ ವಿಷಯಕ್ಕೆ ಬಂದಾಗ ಮೌನವಹಿಸುತ್ತಾರೆ ಎಂದು ಛೇಡಿಸಿದರು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣವು ಸಿಎಂ ಸಿದ್ದರಾಮಯ್ಯ ಮೂಗಿನ ನೇರಕ್ಕೆ ನಡೆದಿದೆ. ಮುಡಾ ಅಕ್ರಮದಲ್ಲಿ ಅವರದೂ ಪ್ರಭಾವವಿದೆ. ಟರ್ಫ್ ಕ್ಲಬ್ ಗೆ ತಮ್ಮ ಸ್ನೇಹಿತ ವಿವೇಕಾನಂದ ಅವರನ್ನು ಸ್ಟೀವರ್ಡ್ (ಸದಸ್ಯ) ಮಾಡಲು 1.30 ಕೋಟಿ ರೂ ಚೆಕ್ ಮುಖೇನ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಎರಡು ಬಾರಿ ಬಿ ರಿಪೋರ್ಟ್  ನ್ನು ಅಧೀನ ನ್ಯಾಯಾಲಯ ತಿರಸ್ಕರಿಸಿದೆ.

ಮೂರು ಪ್ರಕರಣಗಳು ಭ್ರಷ್ಟಾಚಾರಕ್ಕೆ ಕೈಗನ್ನಡಿಯಾಗಿದ್ದು,‌ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು. ಬಿಜೆಪಿಯ ಈ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ರಾಜಿರಹಿತ ಹೋರಾಟ ಮುಂದುವರಿಯಲಿದೆ. ಪಕ್ಷದ ಆಂತರಿಕ ಸಮಸ್ಯೆಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net