

ಆಮ್ಲಜನಕದಿಂದ ತುಂಬಿದ ಪರಿಶುದ್ಧ ಗಾಳಿಗೆ ವಿಷ್ಣುಪಾದಾಮೃತಮ್ ಪರಿಸರದಲ್ಲಿರುವ ವಾಯುವಿಗೆ ಅಂಬರಪೀಯೂಷ, ಜೀವಕೋಶಗಳಿಗೆ ಪೋಷಣೆ ಹಾಗೂ ಆಮ್ಲಜನಕ ನೀಡುವುದಕ್ಕೆ ಪ್ರೀಣಯನ್, ಪ್ರಾಣವಾಯುವಿಗೆ ಪ್ರಾಣಪವನಮ್ ಶರೀರದ ಪ್ರಾಕೃತ ಕ್ರಿಯಾ ಚಟುವಟಿಕೆಗಳಿಗೆ ಜೀವಯನ್ ಎಂಬೆಲ್ಲಾ ಪದಪ್ರಯೋಗ ಮಾಡಲಾಗಿದೆ. ಉಸಿರಾಟಕ್ಕೆ ಅಗತ್ಯವಾದ ಎದೆಯ ಮಾಂಸಖಂಡಗಳು ಹಾಗೂ ವಪೆಯಿಂದ ಎದೆಯು ಅಗಲವಾಗಿ ವಾತಾವರಣದಲ್ಲಿರುವ ಅಂಬರಪೀಯೂಷವನ್ನು ಶ್ವಾಸಕೋಶದ ಒಳಗೆ ಸೆಳೆದುಕೊಂಡು ಅದರಲ್ಲಿರುವ ವಿಷ್ಣುಪಾದಾಮೃತವನ್ನು ಹೃದಯದಿಂದ ಬಂದ ರಕ್ತವು ಪಡೆದುಕೊಂಡು ಮತ್ತೆ ಹೃದಯ ಹಾಗೂ ಅಖಿಲ ದೇಹಕ್ಕೆ ತಲುಪುತ್ತದೆ. ದೇಹವನ್ನು ಶುದ್ಧರಕ್ತದಿಂದ ಪೋಷಿಸುತ್ತಾ ಜಠರಾಗ್ನಿಯನ್ನು ಚುರುಕುಗೊಳಿಸುತ್ತದೆ.
ಶರೀರದ ಎಲ್ಲಾ ಕ್ರಿಯೆಗಳಿಗೂ ತನ್ಮೂಲಕ ಕಾರಣವಾಗುತ್ತದೆ. ಹೀಗೆ ಉಚ್ಛಾ್ವಸ, ನಿಶ್ವಾಸಗಳನ್ನು ಒಳಗೊಂಡ ಶ್ವಾಸಕ್ರಿಯೆಯು ನಡೆಯುತ್ತದೆ. ಕಲುಷಿತ ವಾಯುವನ್ನು ಶ್ವಾಸಕೋಶವು ಹೊರಹಾಕಿ ಪರಿಶುದ್ಧ ಗಾಳಿಯ ಒಳ ಪ್ರವೇಶಕ್ಕೆ ಅನುವು ಮಾಡಿಕೊಡುತ್ತದೆ. ಹೀಗೆ ಸಹಜವಾಗಿಯೇ ವಾತಾವರಣದ ಗಾಳಿಯು ಪ್ರಾಣವಾಯು ಸಂಚರಿಸುವ ನಾಳವಾದ ಪ್ರಾಣವಹ ಸ್ರೋತಸ್ನ ಮೂಲಕ ಶ್ವಾಸಕೋಶದ ಒಳಪ್ರವೇಶಿಸಬೇಕು. ಸ್ಥಾನೀಯವಾಗಿ ಕಫದಿಂದ ತಡೆಯುಂಟಾದರೆ ವಾಯುವು ಪ್ರಕುಪಿತವಾಗಿ ಕಫದೊಂದಿಗೆ ಸೇರಿಕೊಂಡು ಊರ್ಧ್ವಮುಖವಾಗಿ ಅದನ್ನು ಹೊರಹಾಕಲು ಯತ್ನಿಸುತ್ತದೆ. ಆಗ ಉಸಿರಾಟವು ಕಷ್ಟಕರವಾಗುತ್ತದೆ. ಇದನ್ನೇ ಶ್ವಾಸರೋಗ ಎನ್ನುತ್ತೇವೆ.
ಸಾಮಾನ್ಯವಾಗಿ ಎಲ್ಲಾ ರೋಗಗಳೂ ಕೊನೆಯ ಹಂತ ತಲುಪಿ ಮೃತ್ಯು ಸಮೀಪಿಸಿದಾಗ ಅಂತಿಮವಾಗಿ ಕಾಣಿಸಿಕೊಳ್ಳುವುದೂ ಉಸಿರಾಟದ ತೊಂದರೆಯೇ.
ಶ್ವಾಸರೋಗದಲ್ಲಿ ಬಗೆಬಗೆಯಲ್ಲಿ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂದು ಚರಕಸಂಹಿತೆಯಲ್ಲಿ ವಿವರಿಸಲಾಗಿದೆ. ದೀರ್ಘವಾಗಿ ನಿಧಾನವಾಗಿ ನಡೆಯುವ ಉಸಿರಾಟ, ವೇಗದ ಉಸಿರಾಟ, ಬಲು ಕಷ್ಟದಿಂದ ಆಗುವ ಉಸಿರಾಟ, ಮಧ್ಯದಲ್ಲಿ ತಡೆಯೊಂದಿಗೆ ಸಾಗುವ ಉಸಿರಾಟ, ಎದೆಯಿಂದ ಶಬ್ದದೊಂದಿಗೆ ನಡೆಯುವ ಉಸಿರಾಟ, ವೇದನೆಯೊಂದಿಗೆ ಉಸಿರಾಟ ಇತ್ಯಾದಿ. ಪ್ರಾಣವಹ ಸ್ರೋತಸ್ಗೆ ಹೃದಯ ಹಾಗೂ ಜೀರ್ಣಾಂಗವ್ಯೂಹವೇ ಮೂಲ. ಈ ಶ್ವಾಸರೋಗಗಳು ಉದ್ಭವವಾಗುವ ಸ್ಥಳವೂ ಉದರವೇ. ಕಫವನ್ನು ಹೆಚ್ಚಿಸುವ ಆಹಾರ ಅಭ್ಯಾಸಗಳಿಂದ ಜೀರ್ಣಕ್ರಿಯೆ ನಡೆಸುವ ಜಠರಾಗ್ನಿಯು ದುರ್ಬಲವಾಗುತ್ತದೆ. ಇದ
ರಿಂದ ಅಜೀರ್ಣವುಂಟಾಗಿ ಆಮರಸ ಉತ್ಪತ್ತಿಯಾಗಿ ಹೃದಯ, ಪುಪ್ಪುಸಗಳಿಗೆ ಸಂಚರಿಸಿ ಪ್ರಾಣವಹ ಸ್ರೋತಸ್ನ ಶಕ್ತಿ, ಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಇದು ಶ್ವಾಸರೋಗಗಳಿಗೆ ಮೂಲಕಾರಣವಾಗುತ್ತದೆ.
ಅತಿಯಾಗಿ ಒಣ ಆಹಾರ ಸೇವಿಸುವುದು, ಆರೋಗ್ಯಕ್ಕೆ ಒಳ್ಳೆಯದೆಂಬ ಸಬೂಬು ನೀಡಿ ಮಿತಿಯನ್ನು ಮೀರಿ ಗಂಟೆಗಟ್ಟಲೆ ವ್ಯಾಯಾಮವನ್ನು ಮಾಡುವುದು, ದೇಹತೂಕ ಇಳಿಸಲೆಂದೋ, ದೇಹದ ಸೌಂದರ್ಯ ಹೆಚ್ಚಿಸಬೇಕೆಂಬ ತುಡಿತದಿಂದಲೋ ಏನೋ ಅತಿ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವುದು, ದೇಹದಲ್ಲಿ ಉರಿಯನ್ನು ಉಂಟುಮಾಡುವಂತಹ ಆಹಾರ ತೆಗೆದುಕೊಳ್ಳುವುದು, ಜೀರ್ಣಕ್ಕೆ ಕಷ್ಟವಾಗುವಂತಹ ಅನ್ನಪಾನ ಸೇವನೆ, ಮಲಬದ್ದತೆಯನ್ನು ಉಂಟುಮಾಡುವಂತಹ ಆಹಾರ ವಸ್ತುಗಳನ್ನು ಹೆಚ್ಚು ಸೇವನೆ ಗೈಯುವುದು, ದೇಹದ ಸೂಕ್ಷ್ಮ ನಾಡಿಗಳಲ್ಲಿ ತಡೆಯನ್ನು ಉಂಟುಮಾಡುವ ಮೊಸರಿನಂತಹ ಅಭಿಷ್ಯಂದಿ ಆಹಾರ ಸೇವಿಸುವುದು, ಶೀತಲ ಗುಣ- ವೀರ್ಯದ ಆಹಾರ, ಶೀತಲ ಅನ್ನಪಾನ, ಶೀತಮಯ ಸ್ಥಳಗಳಲ್ಲಿ ಕಾಲ ಕಳೆಯುವುದು, ಧೂಳಿನಿಂದ ಕಲುಷಿತ ವಾತಾವರಣ, ವಿಭಿನ್ನ ವಸ್ತುಗಳನ್ನು ಹೊತ್ತಿಸಿ ಉಂಟಾಗುವ ಹೊಗೆ, ಬಿಸಿಲಿನಲ್ಲಿ ತಿರುಗಾಡುವುದು, ಬಿಸಿ ಗಾಳಿಗೆ ಮೈಯೊಡ್ಡುವುದು, ಶರೀರದ ತಾಕತ್ತನ್ನು ಅರಿಯದೆ ಮಿತಿಮೀರಿ ಕೆಲಸ ಮಾಡುವುದು, ತುಂಬಾ ಭಾರವಿರುವ ವಸ್ತುಗಳನ್ನು ಪದೇಪದೇ ಎತ್ತುವುದು,
ಅತಿದೂರ ನಡೆದೇ ಸಾಗುವುದು, ಬದುಕಿನಲ್ಲಿ ತಡೆಯಲೇಬಾರದು ಎಂದು ಹೇಳುವ ಮಲಮೂತ್ರಾದಿ ಹದಿಮೂರು ವೇಗಗಳನ್ನು ಆಗಾಗ ತಡೆಹಿಡಿಯುವುದು, ಲಂಘನ ಬಹಳ ಒಳ್ಳೆಯದೆಂದುಕೊಂಡು ನಿಯಮಿತವಾಗಿ ಮಾಡಬೇಕಾದ ಉಪವಾಸವನ್ನು ಬೇಕುಬೇಕಾದಾಗ ಅತಿಯಾಗಿ ಮಾಡುವುದು- ಇವೆಲ್ಲ ಕಾರಣಗಳಿಂದ ಪ್ರಾಣವಹ ಸ್ರೋತಸ್, ಶ್ವಾಸಕಾಂಗ ವ್ಯೂಹವು ಬಲ ಕಳೆದುಕೊಳ್ಳುತ್ತದೆ. ಜೀರ್ಣಕ್ರಿಯೆಯು ಕಡಿಮೆಯಾಗಿ ಧಾತು ಪೋಷಣೆ, ಜೀವಕೋಶಗಳ ಪೋಷಣೆ ಚೆನ್ನಾಗಿ ನಡೆಯದೆ ಹೃದಯ ಹಾಗೂ ಪುಪ್ಪುಸಗಳು ಶೋಷಣೆಗೊಳಗಾಗಿ ಕಷ್ಟಶ್ವಾಸಕ್ಕೆ ಕಾರಣವಾಗುತ್ತದೆ.
ರಸರಕ್ತಧಾತುಗಳು ಕ್ಷೀಣವಾಗಿ, ಎತ್ತರದ ಹಿಮ ಪ್ರದೇಶ ಅಥವಾ ಗಣಿಗಾರಿಕೆ ನಡೆಯುವಂತಹ ತಗ್ಗು ಪ್ರದೇಶಗಳಲ್ಲಿ ನಿರಂತರವಾಗಿ ಉಸಿರಾಟಕ್ಕೆ ತೊಂದರೆಯಾಗುತ್ತಿದ್ದರೆ ಅದು ಶ್ವಾಸಕೋಶದ ಶಕ್ತಿಯನ್ನು ಕುಂದಿಸುತ್ತದೆ. ಇದಲ್ಲದೆ ಮೂಗು, ಗಂಟಲು ಹಾಗೂ ಎದೆಭಾಗದಲ್ಲಿ ವಾಯು ಸಂಚಾರಕ್ಕೆ ಉಂಟಾಗುವ ನಾನಾ ವಿಧವಾದ ಶಾರೀರಿಕ ಅಡೆತಡೆಗಳಿಂದಲೂ, ಹಿಡಿದಿಡುವ ಪ್ರಕ್ರಿಯೆಗಳಿಂದಲೂ ಶ್ವಾಸರೋಗ ಉಂಟಾಗುತ್ತದೆ. ಪ್ರಾಣ, ಉದಾನ ವಾಯುಗಳು, ಪಾಚಕಪಿತ್ತ ಹಾಗೂ ಅವಲಂಬಕ, ಕ್ಲೇದಕ ಕಫಗಳು ಶ್ವಾಸರೋಗದಲ್ಲಿ ಪ್ರಮುಖ ಪಾತ್ರಧಾರಿಗಳು! (ಪ್ರತಿಕ್ರಿಯಿಸಿ: vvsudina@gmail.com)