

ಪಿರಿಯಾಪಟ್ಟಣ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿಯಲು ಶಿಕ್ಷಣ ಇಲಾಖೆಯ ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ನಿರ್ಲಕ್ಷವೇ ಕಾರಣ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಆರೋಪಿಸಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಹಿಂದಿನ ಸಾಲಿಗೆ ಹೋಲಿಸಿದಲ್ಲಿ ಪ್ರಸಕ್ತ ಸಾಲಿನಲ್ಲಿ 963 ಮಕ್ಕಳ ದಾಖಲಾತಿ ಕಡಿಮೆಯಾಗಿದೆ ಎಂದು ಬಿಇಒ ರವಿಪ್ರಸನ್ನ ಸಭೆಗೆ ಮಾಹಿತಿ ನೀಡಿದಾಗ, ಸಿಡಿಮಿಡಿಗೊಂಡ ಸಚಿವ ಕೆ.ವೆಂಕಟೇಶ್, ದಿನೆ ದಿನೇ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿದ್ದರೆ ಸರ್ಕಾರಿ ಶಾಲೆಗಳನ್ನೇ ಮುಚ್ಚಬೇಕಾದ ಪರಿಸ್ಥಿತಿ ಬರುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ಕ್ಲಸ್ಟರ್ ಮಟ್ಟದಲ್ಲಿ ಪರಿಶೀಲನೆ ನಡೆಸಬೇಕು. ಪಾಲಕರಿಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವಂತೆ ಮನವೊಲಿಸಬೇಕು. ಇದ್ಯಾವುದನ್ನೂ ಮಾಡದೆ ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಸುಮ್ಮನೆ ಕಾಲಹರಣ ಮಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಆಂಗ್ಲಾ ಮಾಧ್ಯಮದ ವ್ಯಾಮೋಹದಿಂದ ಗ್ರಾಮೀಣ ಪ್ರದೇಶಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ ಎಂದು ಮಾತುಗಳು ಕೇಳಿ ಬರುತ್ತಿರುವುದರಿಂದ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿಯೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕೆಗೆ ಅವಕಾಶ ಒದಗಿಸುತ್ತಿದೆ. ಇಷ್ಟಾದರೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದೆಯೆಂದರೆ ಸರ್ಕಾರಿ ಶಿಕ್ಷಕರ ಮೇಲೆ ಅವರಿಗೆ ವಿಶ್ವಾಸವಿಲ್ಲ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಕರು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವತ್ತ ಗಮನ ನೀಡಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೈ.ಪ್ರಸಾದ್ ಮಾಹಿತಿ ನೀಡಿ ತಾಲೂಕಿನಲ್ಲಿ ಈವರೆಗೆ 835 ಮಿ.ಮೀ. ಮಳೆಯಾಗಿದ್ದು ವಾಡಿಕೆ ಮಳೆಯಿಂದ ಶೇ. 60ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ತಾಲೂಕಿನಲ್ಲಿ 26,000 ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಮತ್ತು 11,000 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗಿದ್ದು ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಸುಮಾರು 600 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು.
ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ರೈತರಿಂದ ಸೂಕ್ತ ದಾಖಲೆಗಳನ್ನು ಪಡೆದು ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಬೆಳೆ ಹಾನಿಯ ಪರಿಹಾರ ಪಡೆಯಲು ಕೃಷಿ ಇಲಾಖೆ ವತಿಯಿಂದ ರೈತರಿಗೆ ಸೂಕ್ತ ಮಾಹಿತಿ ನೀಡಬೇಕು. ತಾಲೂಕಿನಲ್ಲಿ ಬಿತ್ತನೆ ಬೀಜಗಳ ಕೊರತೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರಸಗೊಬ್ಬರ ಮಾರಾಟ ಮಾಡಲು ಕೃಷಿ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಸೂಚಿಸಿದರು. ಸರ್ಕಾರದ ಸಬ್ಸಿಡಿ ಯೋಜನೆಯಡಿ ರೈತರಿಗೆ ವಿತರಿಸಲಾಗುತ್ತಿರುವ ಕೃಷಿ ಉಪಕರಣಗಳ ಬಗ್ಗೆ ಪ್ರತಿಯೊಂದು ಗ್ರಾಮದಲ್ಲೂ ಮಾಹಿತಿ ನೀಡುವ ಕೆಲಸವಾಗಬೇಕಿದೆ ಎಂದರು.
ತೋಟಗಾರಿಕೆ ಇಲಾಖೆ ಬಗ್ಗೆ ಬೇಸರ: ತಾಲೂಕಿನಲ್ಲಿ ತೋಟಗಾರಿಕೆ ಇಲಾಖೆಯ ಕಾರ್ಯಕ್ಷಮತೆ ಸಮಾಧಾನಕರವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ತಾಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳ ಬಗ್ಗೆ ನಮಗೇ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಚಿವ ಕೆ.ವೆಂಕಟೇಶ್ ಇದಕ್ಕೆ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ತೋಟಗಾರಿಕೆ ಪ್ರದೇಶದ ವಿಸ್ತೀರ್ಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ತಮ್ಮ ವ್ಯಾಪ್ತಿಯನ್ನು ಇಂತಿಷ್ಟೇ ಪ್ರದೇಶಗಳಿಗೆ ಸೀಮಿತಗೊಳಿಸಿಕೊಂಡು ಹೆಚ್ಚಿನ ರೈತರನ್ನು ತಲುಪುವಲ್ಲಿ ವಿಫಲರಾಗಿದ್ದಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಾಲೂಕಿನ ಕಗ್ಗುಂಡಿ ಗ್ರಾಮದ ಬಳಿ ತೋಟಗಾರಿಕಾ ಇಲಾಖೆಗೆ ಮಂಜೂರಾಗಿರುವ 3 ಎಕರೆ ಜಾಗವನ್ನು ಇಲಾಖೆಯ ವಶಕ್ಕೆ ತೆಗೆದುಕೊಂಡು ಶೀಘ್ರ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅನಿಲ್ ಅವರಿಂದ ಮಾಹಿತಿ ಪಡೆದ ಸಚಿವರು, ಈಗ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಶುಶ್ರುಷಕರ ಕೊರತೆ ಇಲ್ಲದಂತೆ ಕ್ರಮ ವಹಿಸಲಾಗಿದೆ. ಇನ್ನು ಸಾರ್ವಜನಿಕರಿಂದ ಯಾವುದೇ ರೀತಿ ದೂರುಗಳು ಬಾರದಂತೆ ಕರ್ತವ್ಯ ನಿರ್ವಹಿಸಿ. ನಿಮ್ಮ ಮಾತು ಕೇಳದೇ ಇರುವ ವೈದ್ಯರ ಬಗ್ಗೆ ನನಗೆ ಪ್ರತ್ಯೇಕವಾಗಿ ಬಂದು ಮಾಹಿತಿ ನೀಡಿ ಎಂದು ಸಭೆಯಲ್ಲಿ ತಿಳಿಸಿದರು. ತಾಲೂಕಿನಲ್ಲಿ ಲ್ಯಾಬ್ ಟೆಕ್ನಿಷಿಯನ್‌ಗಳ ಕೊರತೆ ಇರುವುದಾಗಿ ಮಾಹಿತಿ ನೀಡಿದ್ದೀರಿ. ಆದಷ್ಟು ಶೀಘ್ರ ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದರು.
ಬೆಟ್ಟದಪುರ ಆಸ್ಪತ್ರೆ ಮೇಲ್ದರ್ಜೆಗೆ: ಬೆೆಟ್ಟದಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲು ಆದೇಶ ಬಂದಿದ್ದು, ಪ್ರಸ್ತುತ ಇರುವ 8 ಹಾಸಿಗೆಗಳ ಆಸ್ಪತ್ರೆಯು 25 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಲಿದ್ದು, ಆಸ್ಪತ್ರೆಯಲ್ಲಿ ಹೆಚ್ಚುವರಿ 3 ವೈದ್ಯರ ನೇಮಕವಾಗಲಿದ್ದು, ಬೆಟ್ಟದಪುರ ಸುತ್ತಮುತ್ತಲಿನ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಅಡುಗೆ ಸಿಬ್ಬಂದಿ ತೆಗೆಯಲು ಆದೇಶ: ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಪ್ರಶಾಂತ್ ಮಾತನಾಡಿ, 25ಕ್ಕಿಂತಲೂ ಕಡಿಮೆ ಮಕ್ಕಳು ಇರುವ ಶಾಲೆಗಳಲ್ಲಿ ಒಬ್ಬರಿಗಿಂತ ಹೆಚ್ಚು ಅಡಿಗೆ ಸಿಬ್ಬಂದಿ ಕೆಲಸ ಮಾಡುತ್ತಿದ್ದರೆ ಅವರನ್ನು ತೆಗೆದುಹಾಕಲು ಸರ್ಕಾರ ಆದೇಶ ಹೊರಡಿಸಿದೆ. ಆ ರೀತಿ ಪ್ರಸಕ್ತ ವರ್ಷದಲ್ಲಿ ಐದು ಶಾಲೆಗಳಲ್ಲಿ ಸಿಬ್ಬಂದಿ ತೆಗೆದುಹಾಕಲಾಗಿದೆ ಎಂದರು. 2011ರಿಂದ ಇದುವರೆಗೂ ತಾಲೂಕಿನಲ್ಲಿ 136 ಅಡುಗೆ ಸಿಬ್ಬಂದಿ ತೆಗೆದು ಹಾಕಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ತಾಲೂಕಿನಲ್ಲಿ 20 ಹೊಸ ಅಡುಗೆ ಮನೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ದುರಸ್ತಿಗಾಗಿ ಸಹ ಕೆಲವು ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ವೇಟಿಂಗ್ ಲಿಸ್ಟ್‌ನಲ್ಲಿದ್ದವರಿಗೆ ಅವಕಾಶ: ಪಶುಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ ಮಾತನಾಡಿ, ತಾಲೂಕಿನಲ್ಲಿ ಏಳು ಪಶುವೈದ್ಯರ ಕೊರತೆಯಿದ್ದು, ಗುತ್ತಿಗೆ ಆಧಾರದಲ್ಲಿ ಈಗಾಗಲೇ ಇಬ್ಬರು ವೈದ್ಯರು ಕೆಲಸಕ್ಕೆ ಸೇರಿದ್ದು, ಇನ್ನುಳಿದ ಐದು ಜನ ಇದುವರೆಗೂ ಕೆಲಸಕ್ಕೆ ಸೇಸರಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ವೆಂಕಟೇಶ್ ಅವರು, ನಿಗದಿತ ಅವಧಿಯಲ್ಲಿ ಕೆಲಸಕ್ಕೆ ಬಾರದ ವೈದ್ಯರ ಬದಲಿಗೆ ವೇಟಿಂಗ್ ಲಿಸ್ಟ್‌ನಲ್ಲಿರುವ ಬೇರೆ ವೈದ್ಯರಿಗೆ ನೇಮಕಾತಿ ಆದೇಶ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಪುರಸಭೆ, ಶಿಶು ಅಭಿವೃದ್ಧಿ ಇಲಾಖೆ, ಮೀನುಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ತಹಸೀಲ್ದಾರ್ ನಿಸರ್ಗ ಪ್ರಿಯ, ತಾಪಂ ಇಒ ಸುನಿಲ್ ಕುಮಾರ್, ಕೆಡಿಪಿ ಸಮಿತಿಯ ಸದಸ್ಯರಾದ ಕೆ.ಆರ್.ನಿರೂಪ, ನಿತಿನ್ ವೆಂಕಟೇಶ್, ಶಫಿ ಅಹಮದ್, ಶೇಖರ್, ಮಹದೇವ್ ಹಾಜರಿದ್ದರು.