ರಾಜ್ಯದಲ್ಲಿ ಇರುವುದು ಟಿಸಿಎಂ, ಡಿಸಿಎಂ ಸರ್ಕಾರ; ಕುಮಾರಸ್ವಾಮಿ ವ್ಯಂಗ್ಯ

dks hdk
Published on

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ದುಸ್ಥಿತಿ ನೋಡಿದರೆ ಐದು ವರ್ಷದಲ್ಲಿ ಎಷ್ಟು ಜನ ಮುಖ್ಯಮಂತ್ರಿಗಳಾಗುತ್ತಾರೋ ಗೊತ್ತಿಲ್ಲ. ಸದ್ಯದ ಸ್ಥಿತಿಯನ್ನು ನೋಡಿದರೆ ಈ ಸರ್ಕಾರವನ್ನು ಟಿಸಿಎಂ(ಟೆಂಪರರಿ ಮುಖ್ಯಮಂತ್ರಿ) ಹಾಗೂ ಡಿಸಿಎಂ(ಡೂಪ್ಲಿಕೇಟ್ ಮುಖ್ಯಮಂತ್ರಿ ) ಸರ್ಕಾರವೆಂದು ಕರೆಯಬಹುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಜೆ.ಪಿ.ಭವನದಲ್ಲಿ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸುವ ಸಂಬಂಧ ಕರೆದಿದ್ದ ಸಭೆ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಭೀಕರ ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಒಬ್ಬರು ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಇನ್ನೊಬ್ಬರು ಮುಖ್ಯಮಂತ್ರಿ ಆಗಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಉಳಿದವರು ಅನೇಕರು ನಾನು ಮುಖ್ಯಮಂತ್ರಿ, ನಾನು ಮುಖ್ಯಮಂತ್ರಿ ಎಂದು ಹಾದಿಬೀದಿಯಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಇದೆಲ್ಲ ನೋಡಿದರೆ ಈ ಸರ್ಕಾರವನ್ನು ಟಿಸಿಎಂ ಹಾಗೂ ಡಿಸಿಎಂ ಸರ್ಕಾರವೆಂದು ಕರೆಯದೆ ಇನ್ನೇನೆಂದು ಕರೆಯಬೇಕು ಎಂದು ಲೇವಡಿ ಮಾಡಿದರು.

ಯಾರಿಗೂ ಗ್ಯಾರಂಟಿ ಇಲ್ಲದ ಈ ಸರ್ಕಾರದಲ್ಲಿ ಐದು ವರ್ಷದಲ್ಲಿ ಎಷ್ಟು ಜನ ಮುಖ್ಯಮಂತ್ರಿಗಳಾಗುತ್ತಾರೋ ಗೊತ್ತಿಲ್ಲ. ಆದರೆ, 136 ಶಾಸಕರು ಇರುವ ಈ ಸರ್ಕಾರಕ್ಕೆ ಕೇವಲ ಐದೇ ತಿಂಗಳಲ್ಲಿ ಅಭದ್ರತೆಯ ಭಾವನೆ ಕಾಡುತ್ತಿದೆ. ಅದಕ್ಕಾಗಿ ಬೇರೆ ಪಕ್ಷದವರಿಗೆ ಗೋಗರೆಯುತ್ತಿದ್ದಾರೆ ಎಂದು ಟೀಕಿಸಿದರು.

19 ಶಾಸಕರ ಬೆಂಬಲ ಕೊಡುತ್ತೇನೆ

ನೀವು ಮುಖ್ಯಮಂತ್ರಿ ಆಗುತ್ತೀರಾ ಹೇಳಿ. ನಾಳೆಯೇ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್‌ನ 19 ಶಾಸಕರ ಬೆಂಬಲವನ್ನೂ ಕೊಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಓಪನ್ ಆಫರ್ ಕೊಟ್ಟರು.

ಜಿ.ಟಿ.ದೇವೇಗೌಡರನ್ನು ಮಂತ್ರಿ ಮಾಡುತ್ತೇನೆ. ಅವರ ಮಗನಿಗೆ ಇನ್ನೇನೋ ಮಾಡುತ್ತೇನೆ ಎಂದು ಆಮಿಷ ಒಡ್ಡುತ್ತಿದ್ದಾರೆ. ಕರೆಮ್ಮ ನಾಯಕ್ ಅವರನ್ನು ಬನ್ನಿ ಅಕ್ಕ ನಮ್ಮ ಪಕ್ಷಕ್ಕೆ ಅಂತಾರೆ. ನಮ್ಮ ಶಾಸಕರಿಗೆ ಆಪರೇಷನ್ ಮಾಡಲು ಭಾರೀ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗುಡುಗಿದರು.

ಡಿನ್ನರ್ ಮೀಟಿಂಗ್ ಆಯ್ತು. ಇವಾಗಾ ಬ್ರೇಕ್ ಫಾಸ್ಟ್ ಮೀಟಿಂಗ್. ನಂತರ ಲಂಚ್ ಮೀಟಿಂಗ್.

ಇದೇ ಮಾಡ್ಕೊಂಡು ಇರ್ತೀರೋ ಇಲ್ಲವೇ ಕೆಲಸ ಮಾಡ್ತೀರೋ ಎಂದು ಹರಿಹಾಯ್ದರು.

ಎನ್‌ಡಿಎಯಿಂದ ಹೊರ ಬರಲಿ...

ಕುಮಾರಸ್ವಾಮಿ ಎನ್‌ಡಿಎ ಮೈತ್ರಿಕೂಟದವವರು. ನಮಗೂ ಎನ್‌ಡಿಎಗೂ ಸಂಬಂಧವಿಲ್ಲ. ಮೊದಲು ಎನ್‌ಡಿಎಯಿಂದ ಆಚೆ ಬಂದು ನಂತರ ಬೆಂಬಲದ ಬಗ್ಗೆ ಮಾತನಾಡಲಿ. ಅವರು ಬೆಂಬಲ ನೀಡುವ ಕಾಲದಲ್ಲೇ ಬೆಂಬಲ ನೀಡಲಿಲ್ಲ. ಈಗೇನು ಬೆಂಬಲ ನೀಡುತ್ತಾರೆ? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ಶಿವಕುಮಾರ್ ನಾಳೆಯೇ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ 19 ಶಾಸಕರ ಬೆಂಬಲ ನೀಡುತ್ತೇವೆ ಎಂಬ ಕುಮಾರಸ್ವಾಮಿ ಹೇಳಿಕೆ ಡಿ.ಕೆ.ಶಿವಕುಮಾರ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net