ಸಮಾಜ ಜಾಗೃತಗೊಳಿಸಲು ಸೈದ್ಧಾಂತಿಕ ಹೋರಾಟ

HUN-JUNE-13-3(B KRISHNAPPA JAYANTHI)
ಹುಣಸೂರು ನಗರದಲ್ಲಿ ಜಿಲ್ಲಾ ದಲಿತ ಮಹಿಳಾ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ ಜಯಂತಿ ಸಮಾರಂಭದಲ್ಲಿ ಗಣ್ಯರು ಭಾಗವಹಿಸಿದ್ದರು. ಜೆ.ಮಹದೇವ್, ಎಚ್.ಎಸ್.ವರದರಾಜು, ಮಹದೇವಮ್ಮ, ಎಂ.ಆರ್.ಹೊಸಳ್ಳಿ ಪ್ರಕಾಶ್, ಡೇವಿಡ್ ರತ್ನಪುರಿ ಇತರರಿದ್ದರು.
Published on

ಹುಣಸೂರು: ರಾಜ್ಯದ ನೆಲದಲ್ಲಿ ಅಂಬೇಡ್ಕರ್ ಸಿದ್ಧಾಂತವನ್ನು ಬಿತ್ತುವ ಮೂಲಕ, ಮನುಷ್ಯ ಸಮಾಜವನ್ನು ಜಾಗೃತಗೊಳಿಸುವ ದಿಸೆಯಲ್ಲಿ ಸೈದ್ಧಾಂತಿಕ ಹೋರಾಟವನ್ನು ಧೀಮಂತ ನಾಯಕ ದಿ.ಪ್ರೊ.ಬಿ.ಕೃಷ್ಣಪ್ಪ ನಡೆಸಿದ್ದರು ಎಂದು ಸೋಸಿಯಲ್ ಜಸ್ಟೀಸ್ ಫೋರಂ ಜಿಲ್ಲಾ ಅಧ್ಯಕ್ಷ ಜೆ. ಮಹದೇವ ತಿಳಿಸಿದರು.

ನಗರದ ಸರ್ಕಾರಿ ನೌಕರರ ಭವನದ ಹೊರಾಂಗಣದಲ್ಲಿ ಶುಕ್ರವಾರ ಜಿಲ್ಲಾ ದಲಿತ ಮಹಿಳಾ ಒಕ್ಕೂಟವು ಆಯೋಜಿಸಿದ್ದ ದಲಿತ ಚಳವಳಿಯ ಚೇತನ ದಿ.ಪ್ರೊ.ಬಿ.ಕೃಷ್ಣಪ್ಪ ಅವರ 88ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ಐದು ದಶಕಗಳ ಹಿಂದೆ ಕರ್ನಾಟಕದ ನೆಲದಲ್ಲಿ ದಲಿತ ಸಂಘರ್ಷ ಸಮಿತಿ(ದಸಂಸ) ಹೆಸರಿನ ಸಾಮಾಜಿಕ ಚಳವಳಿಯನ್ನು ಕಟ್ಟಿದ, ಪ್ರೊ.ಬಿ.ಕೃಷ್ಣಪ್ಪ ಒಬ್ಬ ಪ್ರಖರ ಅಂಬೇಡ್ಕರ್‌ವಾದಿಯಾಗಿದ್ದರು. ಶಿವಮೊಗ್ಗದಲ್ಲಿ ನಡೆದ ಪತ್ರ ಸಂಗಪ್ಪನ ಕಗ್ಗೊಲೆಯನ್ನು ಬಹಿರಂಗವಾಗಿ ಖಂಡಿಸಿ ಸಾರ್ವಜನಿಕ ಹೋರಾಟವನ್ನು ರೂಪಿಸುವ ಮೂಲಕ ಪ್ರಾರಂಭ ಮಾಡಿ, ಚಂದ್ರಗುತ್ತಿಯ ಬೆತ್ತಲೆ ಸೇವೆ ವಿರುದ್ಧ ಹೋರಾಟ, ವಿಷದ ಹೆಂಡ ಬೇಡ ವಸತಿ ಶಾಲೆ ಬೇಕು ಎನ್ನುವ ಹೋರಾಟಗಳು ಬಿ.ಕೃಷ್ಣಪ್ಪ ಅವರ ಸೈದ್ಧಾಂತಿಕ ಚಿಂತನೆಯಿಂದ ಮೂಡಿದ ಚಾರಿತ್ರಿಕ ಹೋರಾಟಗಳಾಗಿವೆ. ಇವು ರಾಜ್ಯದ ಆಡಳಿತ ಮಾದರಿಗೆ ಮಾರ್ಗವನ್ನು ತೋರಿಸಿವೆ ಎಂದು ಅಭಿಪ್ರಾಯಪಟ್ಟರು.

ಈ ನೆಲದ ಸ್ಥಾಪಿತ ಚರಿತ್ರೆ, ಸಂಸ್ಕೃತಿ, ಸಮಾಜ, ರಾಜಕಾರಣವನ್ನು ಮುರಿದು, ನಾಡನ್ನು ಹೊಸ ವಿವೇಕದಲ್ಲಿ ಮರು ರೂಪಿಸಲೆತ್ನಿಸಿದ ಅದಮ್ಯ ಕನಸುಗಾರ ಬಿ.ಕೃಷ್ಣಪ್ಪ. ಆ ಮಹಾನ್ ವ್ಯಕ್ತಿ ಹುಟ್ಟಿದ ದಿನವನ್ನು ನಾವು ಸಂಭ್ರಮಿಸಬೇಕಾದದ್ದು ನಮ್ಮ ಕರ್ತವ್ಯ. ಕಾಕತಾಳೀಯ ಎಂಬಂತೆ ದಲಿತ ಚಳವಳಿಯ ಮೂಲ ಪ್ರವರ್ತಕರಾದ ಮುಂಚೂಣಿಯ ಮೂವರೂ ಕ್ರಮವಾಗಿ ಬಿ.ಕೃಷ್ಣಪ್ಪ, ಸಿದ್ಧಲಿಂಗಯ್ಯ, ದೇವನೂರು ಮಹಾದೇವ ಇವರ ಜಯಂತಿ ಜತೆ ಜತೆಗೆ ಇರುವುದು ಹೆಮ್ಮೆಯ ಸಂಗತಿ ಎಂದರು.

ದಿ.ಪ್ರೊ.ಬಿ.ಕೃಷ್ಣಪ್ಪ ಅವರ ಹೋರಾಟದ ಬದುಕು ಕುರಿತು, ಜಿಲ್ಲಾ ದಲಿತ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಹಾದೇವಮ್ಮ ಕಟ್ಟೆಮಳಲವಾಡಿ ಹಾಗೂ ದಲಿತ ಮುಖಂಡ ಎಚ್.ಎಸ್.ವರದರಾಜು ಮಾತನಾಡಿದರು. ದಸಂಸ ಜಿಲ್ಲಾ ಸಂಯೋಜಕ ಪ್ರಕಾಶ್ ಎಂ. ಆರ್.ಹೊಸಳ್ಳಿ, ಅಹಿಂದ ತಾಲೂಕು ಅಧ್ಯಕ್ಷ ಡೇವಿಡ್ ರತ್ನಪುರಿ, ಅಹಿಂದ ಮುಖಂಡರಾದ ಸೋಮಯ್ಯ, ಜಾನ್ ಕ್ರಿಸ್ಟೋಫರ್, ವಿಜಯ್ ಕುಮಾರ್, ಕಲಾವಿದರಾದ ಹನುಮಯ್ಯ, ಸಿಂಗಯ್ಯ, ಮಹಿಳಾ ಮುಖಂಡರಾದ ಭಾಗ್ಯಮ್ಮ, ವಿದ್ಯಾರ್ಥಿನಿಯರು ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net