

ಬೆಂಗಳೂರು: ಭಾರತದಲ್ಲೇ ತಯಾರಿಸಲಾಗಿರುವ ಕರೊನಾ ನಿಯಂತ್ರಣ ಲಸಿಕೆಯನ್ನು ಬೆಳಗಾವಿಯ ಕೋವಿಡ್ ಆಸ್ಪತ್ರೆ ಸೇರಿ 12 ವೈದ್ಯಕೀಯ ಸಂಸ್ಥೆಗಳ ಮೇಲೆ ಪ್ರಯೋಗಿಸಲಾಗುತ್ತಿದೆ.
ಹೈದರಾಬಾದ್ನ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಸಂಸ್ಥೆಯು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಸಹಯೋಗದಲ್ಲಿ ಉತ್ಪಾದಿಸಿರುವ ಈ ಲಸಿಕೆಯನ್ನು ಆಗಸ್ಟ್ 15ರ ವೇಳೆಗೆ ರೋಗಿಗಳ ಬಳಕೆಗೆ ಬಿಡುಗಡೆಗೊಳಿಸುವ ಉದ್ದೇಶ ಹೊಂದಲಾಗಿದೆ.
ದೇಶದ ಮೊದಲ ಕರೊನಾ ಲಸಿಕೆ ಎಂಬ ಹೆಗ್ಗಳಿಕೆ ಪಡೆದುಕೊಳ್ಳಲಿರುವ ಈ ಔಷಧದ ಕ್ಲಿನಿಕಲ್ ಟ್ರಯಲ್ ಒಡಿಶಾದ ಭುವನೇಶ್ವರದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ಎಸ್ಯುಎಂ ಆಸ್ಪತ್ರೆಯಲ್ಲಿಯೂ ನಡೆಯಲಿದೆ.
ಇದಲ್ಲದೇ, ಆಂಧ್ರದ ವಿಶಾಖಪಟ್ಟಣಂ, ಹರಿಯಾಣದ ರೋಹ್ಟಕ್, ನವದೆಹಲಿ, ಬಿಹಾರದ ಪಟನಾ, ಮಹಾರಾಷ್ಟ್ರದ ನಾಗಪುರ, ಉತ್ತರಪ್ರದೇಶದ ಗೋರಖ್ಪುರ, ಆರ್ಯನಗರ, ಕಾನ್ಪುರ್, ತಮಿಳುನಾಡಿನ ಕಟ್ಟಾಂಕುಲತ್ತೂರ್, ಹೈದರಾಬಾದ್ ಹಾಗೂ ಗೋವಾದಲ್ಲಿ ಕ್ಲಿನಿಕಲ್ ಟ್ರಯಲ್ ನಡೆಯಲಿದೆ.
ಕ್ಲಿನಿಕಲ್ ಟ್ರಯಲ್ ಪ್ರಕ್ರಿಯೆಯನ್ನು ಅತ್ಯಂತ ತ್ವರಿತವಾಗಿ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಅನುಮತಿ ಪ್ರಕ್ರಿಯೆಗಳನ್ನು ವೇಗವಾಗಿ ಪೂರ್ಣಗೊಳಿಸುವಂತೆ ಆಯಾ ರಾಜ್ಯ ಹಾಗೂ ಇಲಾಖೆಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.