

ನವದೆಹಲಿ: ದೇಶ ಕೋವಿಡ್-19 ಸಾಂಕ್ರಾಮಿಕತೆಯಿಂದ ಬಹುತೇಕವಾಗಿ ಚೇತರಿಸಿಕೊಂಡು ನಿಟ್ಟುಸಿರು ಬಿಡುತ್ತಿರುವ ವೇಳೆಯಲ್ಲೇ ರಾಜಧಾನಿ ದೆಹಲಿ ಮತ್ತು ದೇಶದ ನಾನಾ ಭಾಗಗಳಲ್ಲಿ ಕೆಮ್ಮು, ಜ್ವರ ಹಾವಳಿ ನಡೆಸುತ್ತಿದ್ದು ಕಳವಳ ಸೃಷ್ಟಿಸಿದೆ. ಇದಕ್ಕೆ ಎಚ್3ಎನ್2 ವೈರಸ್ ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ. ಜ್ವರದ ಪ್ರಕರಣಗಳಲ್ಲಿ ಏರಿಕೆಯಾಗಿರುವುದು ವಿಜ್ಞಾನಿಗಳನ್ನು ಕೂಡ ಚಿಂತೆಗೀಡು ಮಾಡಿದೆ.
ದೆಹಲಿಯಲ್ಲಿ ಜ್ವರದ (ಫ್ಲೂ ವೈರಸ್) ಹಾವಳಿ ಜಾಸ್ತಿ ಯಾಗಿದೆ. ಈ ಪ್ರಕರಣಗಳು ಎಚ್3ಎನ್2 ಪ್ರಭೇದಕ್ಕೆ ಸಂಬಂಧಿಸಿದ್ದಾಗಿದ್ದು ಕಳೆದ ಎರಡು-ಮೂರು ತಿಂಗಳಿಂದ ಅದು ವ್ಯಾಪಕವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಜನರು ಕೆಲವು ದಿನಗಳು, ಹಾಗೂ ಕೆಲವು ಸಂದರ್ಭಗಳಲ್ಲಿ ಹಲವು ವಾರಗಟ್ಟಲೆ ಕಾಲ ಈ ಜ್ವರದ ಲಕ್ಷಣಗಳಿಂದ ನರಳುತ್ತಿದ್ದಾರೆ. ಪ್ರಸ್ತುತ ದೇಶದಲ್ಲಿ ಪ್ರತಿ ಇಬ್ಬರಲ್ಲಿ ಒಬ್ಬರು ಜ್ವರ, ಕೆಮ್ಮು, ಕಫ, ಧ್ವನಿ ನಷ್ಟ ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದಾರೆ.
ವಾತಾವರಣ ಬದಲಾವಣೆ: ‘ಹಠಾತ್ ಬದಲಾವಣೆ ಯಾಗಿ ಈಗ ಮುಂದುವರಿದಿರುವ ವಾತಾವರಣ’ ಫ್ಲೂ ವೈರಸ್ ಏರಿಕೆಗೆ ಕಾರಣ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್್ಸ) ಸಮುದಾಯ ಔಷಧ ಕೇಂದ್ರದ ವೈದ್ಯರೊಬ್ಬರು ಹೇಳಿದ್ದಾರೆ.
ಕೆಮ್ಮು, ನೆಗಡಿ, ಗಂಟಲು ಕೆರೆತ, ತಲೆನೋವು, ಮೈಕೈ ನೋವು, ಜ್ವರ. ಸೀಸನಲ್ ಇನ್ಫ್ಲೂಯೆಂಝಾ ವೈರಸ್ನಿಂದ ಉಂಟಾಗುವಂಥ ಲಕ್ಷಣಗಳು ಕೂಡ ಇದೇ ರೀತಿ ಇರುತ್ತವೆ.
ಜನರು ಆದಷ್ಟು ಮನೆಯಿಂದ ಹೊರಗೆ ಹೋಗದಿರುವುದು ಉತ್ತಮ ಎಂಬುದು ತಜ್ಞರ ಸಲಹೆ. ಜ್ವರದ ವಿರುದ್ಧ ಲಸಿಕೆ ಪಡೆಯುವುದು, ನೈರ್ಮಲ್ಯ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಪ್ರತಿಕಾಯಗಳು ಮತ್ತು ಸೀರಂನಲ್ಲಿರುವ ಇತರ ಅಂಶಗಳ ಪರೀಕ್ಷೆಯ (ಸೆರಾಲಾ ಜಿಕಲ್) ನಿಗಾ ಕೂಡ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಸೇರಿದೆ.
ವೃದ್ಧರು, ಮಕ್ಕಳು ಮತ್ತು ಗರ್ಭಿಣಿಯರು ಹೆಚ್ಚಾಗಿ ಈ ವೈರಸ್ಗೆ ಈಡಾಗುತ್ತಾರೆ.
ಜ್ವರದ ಹಾವಳಿ ಹೆಚ್ಚಾಗಿರುವುದರ ನಡುವೆ, ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಜನರಿಗೆ ಮಹತ್ವದ ಸಲಹೆಯೊಂದನ್ನು ನೀಡಿದೆ. ಅಝಿತ್ರೋಮೈಸಿನ್ ಮತ್ತು ಅಮೊಕ್ಸಿಕ್ಲಾವ್ನಂಥ ಆಂಟಿಬಯಾಟಿಕ್ಗಳನ್ನು ಅನಗತ್ಯವಾಗಿ ಸೇವಿಸದಂತೆ ಅದು ಎಚ್ಚರಿಕೆ ನೀಡಿದೆ. ‘ಅಗತ್ಯವಿಲ್ಲದಿದ್ದಾಗ ಆಂಟಿಬಯಾಟಿಕ್ಸ್ ಸೇವಿಸಬೇಡಿ. ಇದರಿಂದ ಆಂಟಿಬಯಾಟಿಕ್- ಪ್ರತಿರೋಧ ಶಕ್ತಿ ಬೆಳೆಯುತ್ತದೆ’ ಎಂದು ಐಎಂಎ ಅಧ್ಯಕ್ಷ ಶರದ್ ಕುಮಾರ್ ಅಗರ್ವಾಲ್ ಸಹಿ ಮಾಡಿರುವ ಹೇಳಿಕೆ ತಿಳಿಸಿದೆ. ಅಂಥ ಸನ್ನಿವೇಶದಲ್ಲಿ ನಿಜವಾಗಿಯೂ ಆಂಟಿಬಯಾಟಿಕ್ನ ಅಗತ್ಯ ಬಿದ್ದಾಗ ಅದು ಕೆಲಸ ಮಾಡುವುದಿಲ್ಲ ಎಂಬುದು ಐಎಂಎ ಕಳವಳಕ್ಕೆ ಕಾರಣವಾಗಿದೆ. ಅಕ್ಟೋಬರ್ನಿಂದ ಫೆಬ್ರವರಿ ವರೆಗೆ ಇನ್ಫ್ಲುಯೆಂಝಾ ಮತ್ತು ಇತರ ವೈರಸ್ಗಳಿಂದಾಗಿ ಸೀಸನಲ್ ಶೀತ ಮತ್ತು ಕೆಮ್ಮು ಬರುವುದು ಸರ್ವೆಸಾಮಾನ್ಯ ಎಂದು ಐಎಂಎ ಅಭಿಪ್ರಾಯ ಪಟ್ಟಿದೆ.
ಹೊರ ರೋಗಿ ವಿಭಾಗಕ್ಕೆ (ಓಪಿಡಿ) ಬರುತ್ತಿರುವ ವೈರಲ್ ಸೋಂಕಿತ ರೋಗಿಗಳ ಸಂಖ್ಯೆಯಲ್ಲಿ ಶೇಕಡ 90 ಏರಿಕೆಯಾಗಿದೆ ಎಂದು ಚಾಣಕ್ಯಪುರಿಯ ಪ್ರೈಮಸ್ ಹಾಸ್ಪಿಟಲ್ನ ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯ ರೋಗಿಗಳಲ್ಲಿ ಜ್ವರ, ನೆಗಡಿ, ಕೆಮ್ಮು, ಅತಿಸಾರ, ತೀವ್ರ ಬ್ರಾಂಕೈಟಿಸ್ನಂಥ (ಶ್ವಾಸನಾಳಗಳ ಉರಿಯೂತ) ಶ್ವಾಸಕೋಶದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಈಗ ಭಾರತದಲ್ಲಿ ಕಾಟ ಕೊಡುತ್ತಿರುವ ಜ್ವರದ ಪ್ರಕರಣ ಗಳು ಕಳೆದ ವರ್ಷ ಸೆಪ್ಟೆಂಬರ್ನಿಂದ ಈ ವರ್ಷ ಜನವರಿ ನಡುವೆ ಪಾಶ್ಚಿಮಾತ್ಯ ದೇಶಗಳಲ್ಲಿ ಹಾವಳಿ ನಡೆಸಿದ್ದ ಜ್ವರದಂತೆಯೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ.