14ನೇ ಐಪಿಎಲ್ ಭಾಗ-2 ಅಕ್ಟೋಬರ್ 15ರವರೆಗೆ ವಿಸ್ತರಣೆ ಅನುಮಾನ

ipl web
Published on

ದುಬೈ: 14ನೇ ಆವೃತ್ತಿಯ ಐಪಿಎಲ್‌ನ ಎರಡನೇ ಹಂತದ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಅಂತಿಮ ಸಿದ್ಧತೆಯಲ್ಲಿದೆ. ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 15 ರವರೆಗೆ ಉಳಿದ 31 ಪಂದ್ಯಗಳು ನಡೆಯಲಿವೆ ಎಂದು ವರದಿಯಾಗಿತ್ತು. ಆದರೆ, ಅಕ್ಟೋಬರ್ 15 ರವರೆಗೂ ಐಪಿಎಲ್ ಆಯೋಜಿಸಲು ಐಸಿಸಿ ಅನುಮತಿ ನೀಡುವುದು ಅನುಮಾನವೆನಿಸಿದೆ. ಅಕ್ಟೋಬರ್ 10ರೊಳಗೆ ಲೀಗ್ ಮುಕ್ತಾಯಗೊಳಿಸುವಂತೆ ಮೌಖಿಕವಾಗಿ ಹೇಳಿದೆ ಎನ್ನಲಾಗಿದೆ.

ಕೋವಿಡ್-19ರಿಂದ ಮುಂದೂಡಿಕೆಯಾಗಿರುವ ಐಪಿಎಲ್ ಪಂದ್ಯಗಳನ್ನು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಯುಎಇಯಲ್ಲಿ ಆಯೋಜಿಸಲಾಗುವುದು ಎಂದು ಬಿಸಿಸಿಐ ಮೇ 29 ರಂದು ನಡೆದ ವಿಶೇಷ ಮಹಾಸಭೆಯಲ್ಲಿ ತೀರ್ಮಾನಿಸಿತ್ತು. ಜೂನ್ 1 ರಂದು ನಡೆದ ಐಸಿಸಿ ಸಭೆಗೆ ಹಾಜರಾಗಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಷಾ ಕಳೆದ 10 ದಿನಗಳಿಂದಲೂ ದುಬೈನಲ್ಲಿ ಬೀಡು ಬಿಟ್ಟಿದ್ದಾರೆ.

ಸ್ಥಳೀಯ ಕ್ರಿಕೆಟ್ ಸಂಸ್ಥೆಗಳೊಂದಿಗೆ ಲೀಗ್ ಆಯೋಜನೆ ಸಂಬಂಧ ಮಾತುಕತೆಯಲ್ಲಿ ತೊಡಗಿದೆ. ಆದರೆ, ಅಕ್ಟೋಬರ್ 10ರೊಳಗೆ 31 ಪಂದ್ಯಗಳನ್ನು ಮುಕ್ತಾಯಗೊಳಿಸುವಂತೆ ಐಸಿಸಿ ಬಿಸಿಸಿಐಗೆ ಸೂಚಿಸಿದೆ ಎನ್ನಲಾಗಿದೆ. ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ 18ರಂದು ಆರಂಭಗೊಳ್ಳಲಿದ್ದು, ಅದಕ್ಕೆ ಕೇವಲ 3 ದಿನ ಅಂತರದವರೆಗೆ ಐಪಿಎಲ್ ಆಯೋಜನೆಗೆ ಐಸಿಸಿ ಅವಕಾಶ ಕಲ್ಪಿಸುವ ಸಾಧ್ಯತೆ ಇಲ್ಲ. ಐಸಿಸಿ ನಿಯಮದ ಪ್ರಕಾರ, ಟಿ20 ವಿಶ್ವಕಪ್‌ಗೂ ಮುನ್ನ ಕನಿಷ್ಠ 7 ರಿಂದ 10 ದಿನಗಳ ವರೆಗೆ ಯಾವುದೇ ಟೂರ್ನಿಗಳು ನಡೆಯುವಂತಿಲ್ಲ. ಅಲ್ಲದೆ, ಟಿ20 ವಿಶ್ವಕಪ್‌ಗೆ ಮುನ್ನ ಅಕ್ಟೋಬರ್ 15ರವರೆಗೆ ಐಪಿಎಲ್‌ನಲ್ಲಿ ಆಡಲು ವಿದೇಶಿ ಸ್ಟಾರ್ ಆಟಗಾರರಿಗೆ ಅವರ ತವರು ಮಂಡಳಿಗಳು ಅನುಮತಿ ನೀಡುವುದು ಕೂಡ ಅನುಮಾನವೆನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net