

ಕತಾರ್: ಇಂಡಿಯನ್ ಕಲ್ಚರಲ್ ಸೆಂಟರ್ (ಐಸಿಸಿ) ಆಯೋಜಿಸಿದ್ದ 23ನೇ ನಾಟ್ಯಾಂಜಲಿ ನೃತ್ಯೋತ್ಸವ ಸಮಾರಂಭವು ನ. 27ರಂದು ಕತಾರ್ನ ಐಸಿಸಿ ಅಶೋಕ ಹಾಲ್ನಲ್ಲಿ ನಡೆಯಿತು. ಪ್ರತಿವರ್ಷದಂತೆ ಈ ವರ್ಷವೂ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಐಸಿಸಿಯ 42 ನೃತ್ಯಪಟುಗಳು ಭಾಗವಹಿಸಿದ್ದರು.
ಐಸಿಸಿಯ ಈ ನಾಟ್ಯಾಂಜಲಿ ಡ್ಯಾನ್ಸ್ ಫೆಸ್ಟಿವಲ್ಗೆ ನೃತ್ಯಪಟುಗಳಷ್ಟೇ ಅಲ್ಲದೆ ಅವರ ಪಾಲಕರು ಹಾಗೂ ಇತರ ಭಾರತೀಯರು ಕೂಡ ಸಾಕ್ಷಿಯಾದರು. ಐಸಿಸಿ ಭಾರತೀಯ ನೃತ್ಯ ಪ್ರಕಾರಗಳಾದ ಮೋಹಿನಿಯಾಟ್ಟಂ, ಕೂಚಿಪುಡಿ, ಕಥಕ್, ಮಣಿಪುರಿ, ಭರತನಾಟ್ಯ ಹಾಗೂ ಒಡಿಸಿ ನೃತ್ಯಕ್ಕೆ ಸಂಬಂಧಿಸಿದಂತೆ ಕತಾರ್ನಲ್ಲಿ ತರಗತಿ ನಡೆಸುತ್ತಿದೆ. ಐಸಿಸಿನ ನೃತ್ಯ ಶಿಕ್ಷಕಿ ಕಲಾಮಂಡಲಂ ಮಟಿಲ್ದ ಸೊಲೊಮನ್ ಅವರು ಇಲ್ಲಿನ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡುತ್ತಿದ್ದಾರೆ.
ಕತಾರ್ನ ಭಾರತೀಯ ರಾಯಭಾರ ಕಚೇರಿಯ ಸೆಕೆಂಡ್ ಸೆಕ್ರೆಟರಿ ಫಾರ್ ಪೊಲಿಟಿಕಲ್ ಆ್ಯಂಡ್ ಎಕನಾಮಿಕ್ ಡಾ. ಸಾಹಿಲ್ ಕುಮಾರ್ ಅವರು ಈ ನೃತ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ನೆರೆದವರನ್ನು ಉದ್ದೇಶಿಸಿ ಮಾತನಾಡಿದರು. ಅಲ್ಲದೆ ಐಸಿಸಿ ವತಿಯಿಂದ ನೃತ್ಯ ಶಿಕ್ಷಕಿ ಕಲಾಮಂಡಲಂ ಮಟಿಲ್ದ ಸೊಲೊಮನ್ ಅವರಿಗೆ ಸ್ಮರಣಿಕೆ ಹಾಗೂ ಭಾಗವಹಿಸಿದ ನೃತ್ಯಪಟುಗಳಿಗೆ ಪ್ರಮಾಣಪತ್ರ ವಿತರಿಸಿದರು. ಐಸಿಸಿ ಅಧ್ಯಕ್ಷ ಪಿ.ಎನ್. ಬಾಬುರಾಜನ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ಹಾಗೂ ಐಸಿಸಿಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಐಸಿಸಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅಧ್ಯಕ್ಷೀಯ ಭಾಷಣ ಮಾಡಿದರು. ಇನ್ಹೌಸ್ ಆ್ಯಕ್ಟಿವಿಟೀಸ್ ಮುಖ್ಯಸ್ಥ ಮೋಹನ್ ಕುಮಾರ್ ಸ್ವಾಗತ ಭಾಷಣ ಮಾಡಿದರು. ನೊರೀನ್ ತೊಟ್ಟನ್, ನಿಖಿಗಾ ಫ್ಲೂಜೋ ಕಾರ್ಯಕ್ರಮವನ್ನು ನಿರೂಪಿಸಿದರು. ಎಚ್ಆರ್ ಮುಖ್ಯಸ್ಥ ಅನಿಶ್ ಜಾರ್ಜ್ ಮ್ಯಾಥ್ಯೂ ಧನ್ಯವಾದ ಸಮರ್ಪಣೆ ಮಾಡಿದರು.