ಭಾರತದ ಕೈತಪ್ಪುವುದೇ ಟಿ20 ವಿಶ್ವಕಪ್ ಆತಿಥ್ಯ?

BCCI
Published on

ನವದೆಹಲಿ: ತೆರಿಗೆ ವಿನಾಯಿತಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಬಿಸಿಸಿಐ ಮತ್ತು ಐಸಿಸಿ ನಡುವೆ ಮತ್ತೊಮ್ಮೆ ಭಿನ್ನಾಭಿಪ್ರಾಯ ಮೂಡಿದೆ. ಇದರಿಂದಾಗಿ 2021ರಲ್ಲಿ ಭಾರತದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಬಿಸಿಸಿಐಗೆ ಐಸಿಸಿ ಬೆದರಿಕೆ ಒಡ್ಡಿದೆ. ಆದರೆ ಈ ರೀತಿಯ ಆತುರದ ನಿರ್ಧಾರಕ್ಕೆ ಐಸಿಸಿ ನಿರ್ದೇಶಕರು ಮುಂದಾಗದಿರಬಹುದು ಎಂದು ಬಿಸಿಸಿಐ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏನಿದು ವಿವಾದ: ಐಸಿಸಿ ಈಗಾಗಲೆ 2021ರ ಟಿ20 ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್ ಟೂರ್ನಿಗಳ ಆತಿಥ್ಯವನ್ನು ಭಾರತಕ್ಕೆ ವಹಿಸಿದೆ. ಜತೆಗೆ ಈ ಟೂರ್ನಿಗಳಿಗೆ ಕೇಂದ್ರ ಸರ್ಕಾರದಿಂದ ತೆರಿಗೆ ವಿನಾಯಿತಿ ಕೊಡಿಸಲೇಬೇಕೆಂಬುದು ಐಸಿಸಿ ಒತ್ತಾಯವಾಗಿದೆ. ಆದರೆ ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳಿಂದಾಗಿ ತೆರಿಗೆ ವಿನಾಯಿತಿ ಕೊಡಿಸುವುದು ಬಿಸಿಸಿಐಗೆ ಕಠಿಣವೆನಿಸಿದೆ.

2019ರ ಡಿಸೆಂಬರ್​ವರೆಗೆ ಐಸಿಸಿ ಮೊದಲ ಗಡುವು ನೀಡಿತ್ತು. ಬಳಿಕ ಇದನ್ನು ಈ ವರ್ಷ ಮೇ 18ರವರೆಗೆ ವಿಸ್ತರಿಸಿತ್ತು. ಆದರೆ ಲಾಕ್​ಡೌನ್​ನಿಂದಾಗಿ ಸರ್ಕಾರದ ಜತೆಗೆ ಮಾತುಕತೆ ಸಾಧ್ಯವಾಗಿಲ್ಲ. ಹೀಗಾಗಿ ಜೂನ್ 30ರವರೆಗೆ ಅಥವಾ ಲಾಕ್​ಡೌನ್ ತೆರವಾದ ಒಂದು ತಿಂಗಳವರೆಗೆ ಗಡುವು ವಿಸ್ತರಿಸುವಂತೆ ಬಿಸಿಸಿಐ ಕೇಳಿಕೊಂಡಿದೆ. ಇದಕ್ಕೆ ಒಪ್ಪದ ಐಸಿಸಿ, 2021ರ ಟೂರ್ನಿಯನ್ನೇ ಸ್ಥಳಾಂತರಗೊಳಿಸುವ ಮಾತಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net