ದುಡಿದ ಹಣ ಹಾಳು ಮಾಡಿದವಳಲ್ಲ ನಮ್ಮ ಮಗಳು! ಆತ ಚಿತ್ರಹಿಂಸೆ... ನಿಲ್ಲದ ಮೇಘಾ ಹೆತ್ತವರ ಕಣ್ಣೀರು | IB Officer

ವಿಜಯವಾಣಿ - 2025-04-01T164738.105
Published on

IB Officer Death: ಸೋಮವಾರ (ಮಾ.24) ಶವವಾಗಿ ಪತ್ತೆಯಾದ ಕೇರಳದ ಗುಪ್ತಚರ ಬ್ಯೂರೋ (ಐಬಿ) ಅಧಿಕಾರಿ ಮೇಘಾ ಮಧುಸೂದನನ್ (24), ರೈಲ್ವೆ ಹಳಿ ಪಕ್ಕ ಮೃತಪಟ್ಟ ಸುದ್ದಿ ಸಂಬಂಧಿಕರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಮಗಳ ಸಾವಿನ ಹಿಂದಿರುವ ಸಹೋದ್ಯೋಗಿ, ಪ್ರೇಮಿ ಕೈವಾಡವನ್ನು ತನಿಖೆ ಮೂಲಕ ಬಯಲಿಗೆಳೆಯಬೇಕು ಮತ್ತು ಸಾವಿನ ಸುತ್ತಲಿನ ಸಂದರ್ಭಗಳನ್ನು ಬಹಿರಂಗಪಡಿಸಲು ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದರು. ಅಂತೆಯೇ ಪ್ರಸ್ತುತ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ದುಡಿದ ಪ್ರತಿ ತಿಂಗಳ ಸಂಬಳವನ್ನು ತನ್ನ ಸಹೋದ್ಯೋಗಿಯ ಬ್ಯಾಂಕ್​ ಖಾತೆಗೆ ವರ್ಗಾಯಿಸುತ್ತಿದ್ದ ಮೇಘಾ, ತನಗಾಗಿ ಎಂದು ಕೇವಲ 100 ರೂ. ಕೂಡ ಇಟ್ಟುಕೊಳ್ಳುತ್ತಿರಲಿಲ್ಲ ಎಂಬ ಸಂಗತಿ ದುರಂತ. ಪ್ರಿಯಕರನ ಮಾನಸಿಕ ಹಿಂಸೆ, ಆಮಿಷಗಳಿಗೆ ಸಿಲುಕಿದ್ದ ಮೇಘಾ, ಈ ವಿಷಯದಲ್ಲಿ ಯಾರ ಸಹಾಯವನ್ನೂ ಪಡೆಯದೆ, ಯಾರೊಂದಿಗೂ ಹೆಚ್ಚು ಪ್ರಸ್ತಾಪಿಸದೆ ಇದ್ದದ್ದು ಆಕೆಯ ದುರಂತ ಅಂತ್ಯಕ್ಕೆ ಕಾರಣ ಎಂದು ಹೇಳಲಾಗಿದೆ. ಮಗಳ ಅಗಲಿಕೆ ನೆನೆದು ಭಾವುಕರಾದ ಪೋಷಕರು, "ಬಾಲ್ಯದಿಂದಲೂ ಅವಳ ಮನಸ್ಥಿತಿ ಉಳಿತಾಯದ ಹಾದಿಯನ್ನೇ ಅವಲಂಬಿಸಿತ್ತು. ಹಣ ಉಳಿಸುವ ಹಂಬಲದಲ್ಲಿ ಕುಡಿಕೆಯಲ್ಲಿ ಹಣ ಕೂಡಿಡುತ್ತಿದ್ದಳು" ಎಂದಿದ್ದಾರೆ.

"ಆ ಕುಡಿಕೆ ತುಂಬಿದ ಮರುದಿನವೇ ಅದರಲ್ಲಿನ ಹಣ ತೆಗೆದು, ಅದನ್ನು ಅವರ ತಂದೆ ಇಲ್ಲವೇ ನನ್ನ ಬಳಿ ನೀಡುತ್ತಿದ್ದಳು. ಅನಗತ್ಯ ಖರ್ಚು ಮಾಡುತ್ತಿರಲಿಲ್ಲ. ಪ್ರತಿದಿನ ಬೆಳಗ್ಗೆ ನನ್ನೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡುತ್ತಿದ್ದಳು. ಅವಳು ಸಾಯುವ ದಿನ ನಾನು ಕರೆ ಮಾಡಿದ್ದೆ. ಆಗ ನನಗೆ ತಡವಾಯಿತು, ಕೆಲವು ಸಮಯದ ನಂತರ ಫೋನ್ ಮಾಡ್ತೀನಿ ಎಂದಳು. ಆದರೆ, ಅದೇ ಅವಳೊಂದಿಗೆ ನಾನು ಮಾತನಾಡುವ ಕೊನೆಯ ಮಾತು ಎಂಬುದು ನನಗೆ ಗೊತ್ತಿರಲಿಲ್ಲ. ಆತ ನನ್ನ ಮಗಳಿಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ. ಆಕೆಯ ಮೇಲೆ ಆರ್ಥಿಕ ಒತ್ತಡ ಹೇರಿದ್ದಾನೆ" ಎಂದು ಮೇಘಾ ತಾಯಿ ಕಣ್ಣೀರಿಟ್ಟಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net