ಕಿತ್ತು ತಿನ್ನೋ ಬಡತನ, ಕೋವಿಡ್​ನಿಂದ ತಂದೆ ಸಾವು! ದಿನಗೂಲಿ ನೌಕರ IAS ಅಧಿಕಾರಿಯಾಗಿದ್ದೇ ಸ್ಫೂರ್ತಿದಾಯಕ

Ram Bhajan Kumar IAS
Published on

ಕೇಂದ್ರ ನಾಗರಿಕ ಸೇವಾ ಪರೀಕ್ಷೆ ( UPSC ) ಯನ್ನು ಪಾಸ್​ ಮಾಡಬೇಕೆಂಬುದು ಲಕ್ಷಾಂತರ ಮಂದಿಯ ಕನಸು. ಇದೇ ಕನಸು ಹೊತ್ತುಕೊಂಡು ಪ್ರತಿವರ್ಷ ಪರೀಕ್ಷೆಯನ್ನು ಎದುರಿಸುತ್ತಾರೆ. ಐಎಎಸ್​ ( IAS ), ಐಪಿಎಸ್ ( IPS )​, ಐಎಫ್​ಎಸ್ ( IFS )​ ಸೇರಿದಂತೆ ಇನ್ನಿತರ ಹುದ್ದೆಯನ್ನು ಪಡೆಯಬೇಕೆಂದು ಶ್ರಮಿಸುತ್ತಾರೆ. ಆದರೆ, ಕೆಲವೇ ಮಂದಿ ಮಾತ್ರ ಈ ಪ್ರಯತ್ನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ.

ಇನ್ನು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರು ಈ ಸಾಧನೆ ಮಾಡಿದರೆ ಅಷ್ಟೊಂದು ಗಮನ ಸೆಳೆಯುವುದಿಲ್ಲ. ಆದರೆ, ನಿರಂತರವಾಗಿ ಸವಾಲುಗಳನ್ನು ಎದುರಿಸಿ, ಕಷ್ಟಗಳನ್ನು ಮೆಟ್ಟಿನಿಂತು ಉನ್ನತ ಸ್ಥಾನಕ್ಕೇರುವವರು ದೇಶದ ಜನತೆಯ ನಡುವೆ ವಿಶೇಷ ಗಮನವನ್ನು ಸೆಳೆಯುತ್ತಾರೆ. ಯುಪಿಎಸ್​ಸಿ ಪಾಸ್​ ಮಾಡಬೇಕೆಂಬ ಅನೇಕರಿಗೆ ಸ್ಫೂರ್ತಿಯ ಚಿಲುಮೆಯಾಗಿ ನಿಲ್ಲುತ್ತಾರೆ. ಅಂತಹ ಸ್ಫೂರ್ತಿದಾಯಕ ವ್ಯಕ್ತಿಗಳಲ್ಲಿ ಐಎಎಸ್​ ರಾಮ್​ ಭಜನ್​ ಕುಮಾರ್​ ಕೂಡ ಒಬ್ಬರು.

ಯಾರು ಈ ರಾಮ್​ ಭಜನ್​ ಕುಮಾರ್​?

ಭಜನ್​ ಕುಮಾರ್​ ಅವರು 2022ನೇ ಸಾಲಿನ ಐಎಎಸ್​ ಅಧಿಕಾರಿ. ಇವರು ಮೂಲತಃ ಕಡಿಮೆ ಆದಾಯದ ಕುಟುಂಬದಿಂದ ಬಂದವರು. ರಾಜಸ್ಥಾನದ ಬಾಪಿ ಗ್ರಾಮದಲ್ಲಿ ಜನಿಸಿದ ಭಜನ್​ ಕುಮಾರ್​, ಜೀವನದುದ್ದಕ್ಕೂ ಸಾಕಷ್ಟು ಸವಾಲುಗಳನ್ನು ಎದುರಿಸಿದರು. ದಿನ ನಿತ್ಯದ ಊಟಕ್ಕಾಗಿ ತನ್ನ ತಾಯಿಯೊಂದಿಗೆ ಸೇರಿ ಕೂಲಿ ಕೆಲಸ ಮಾಡುತ್ತಿದ್ದರು. ಕಲ್ಲುಗಳನ್ನು ಒಡೆಯುವುದು ಮತ್ತು ಲೋಡ್​ಗಳನ್ನು ಸಾಗಿಸುವ ಕೆಲಸವನ್ನು ಭಜನ್​ ಕುಮಾರ್​ ಮಾಡುತ್ತಿದ್ದರು.

ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೇ ಮಹಾಮಾರಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಭಜನ್​ ಕುಮಾರ್ ಅವರು ತಂದೆಯನ್ನು ಕಳೆದುಕೊಂಡಾಗ ಅವರ ಕುಟುಂಬವೂ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿತು. ತನ್ನ ತಂದೆ ಬಿಟ್ಟು ಹೋದ ಬಳಿಕ ಇನ್ನಷ್ಟು ಜವಾಬ್ದಾರಿಗಳು ಭಜನ್​ ಕುಮಾರ್​ ಹೆಗಲಿಗೆ ಬಿದ್ದಿತು. ಹೀಗಾಗಿ ತನ್ನ ಬಡ ಕುಟುಂಬಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದರು. ಇದರ ನಡುವೆ ತಮ್ಮ ಅಧ್ಯಯನಕ್ಕೂ ಸ್ವಲ್ಪ ಸಮಯವನ್ನು ಮೀಸಲಿಟ್ಟಿದ್ದರು. ಹೀಗಾಗಿ ಭಜನ್​ ಕುಮಾರ್​ ರಾಜಸ್ಥಾನದ ದೌಸಾದ ಸರ್ಕಾರಿ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಪಡೆದರು.

ರಾಮ್ ಭಜನ್ ಕುಮಾರ್ ಅವರು 2009ರಲ್ಲಿ ದೆಹಲಿಯಲ್ಲಿ ಪೋಲೀಸ್‌ ಕಾನ್ಸ್‌ಟೇಬಲ್ ಕೆಲಸ ಪಡೆದರು. ಕಾನ್‌ಸ್ಟೆಬಲ್ ಆಗಿದ್ದ ಸಮಯದಲ್ಲಿ ಅವರು ದೇಶದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್​ಸಿ ಭೇದಿಸಲು ಸ್ಫೂರ್ತಿ ಪಡೆದರು. 2015 ರಿಂದ UPSCಗೆ ತಯಾರಿ ಆರಂಭಿಸಿದ ರಾಮ್ ಭಜನ್ ಕುಮಾರ್, ಏಳು ಬಾರಿ ಪರೀಕ್ಷೆಯಲ್ಲಿ ಫೇಲ್​ ಆದರು. ಆದರೆ, ತಮ್ಮ ಸಮರ್ಪಣೆ ಮತ್ತು ಅದಮ್ಯ ಮನೋಭಾವದಿಂದ ಪಯತ್ನ ಮುಂದುವರಿಸಿದರು. ಸೋಲೇ ಗೆಲುವಿನ ಮೆಟ್ಟಿಲು ಎಂಬಂತೆ ತಮ್ಮ ಓದುವ ತಂತ್ರವನ್ನು ಬದಲಾಯಿಸಿದರು ಮತ್ತು ಅಂತಿಮವಾಗಿ 2022 ರಲ್ಲಿ ಆಲ್​ ಇಂಡಿಯಾ ರ್ಯಾಂಕ್​ 667 ನೊಂದಿಗೆ ಯುಪಿಎಸ್​ಸಿ ಪಾಸ್​ ಮಾಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net