

ಚಂಡೀಗಢ: ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಆತ್ಮಹತ್ಯೆಯು ಹಲವು ವರ್ಷಗಳಿಂದ ದಲಿತರ ವಿರುದ್ಧ ನಡೆಸಲಾಗುತ್ತಿರುವ ತಾರತಮ್ಯದ ಪರಿಣಾಮವಾಗಿದೆ ಎಂದು ಬಿಜೆಪಿ ನೇತೃತ್ವದ ಹರಿಯಾಣ ಮತ್ತು ಕೇಂದ್ರ ಸರ್ಕಾರವನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಮಂಗಳವಾರ (ಅಕ್ಟೋಬರ್,14) ಟೀಕಿಸಿದ್ದಾರೆ.
ಚಂಡೀಗಢದಲ್ಲಿ ಪೂರಣ್ ಕುಮಾರ್ ಕುಟುಂಬವನ್ನು ಭೇಟಿಯಾದ ನಂತರ ಮಾತನಾಡಿದ ರಾಹುಲ್, ಹರಿಯಾಣದಲ್ಲಿ ಕೆಳಜಾತಿಯ ಜನರಿಗೆ ತಮ್ಮ ಬದ್ಧತೆಯನ್ನು ಪೂರೈಸುವಂತೆ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿಯನ್ನು ಕೇಳಿದ್ದಾರೆ. ಅಲ್ಲದೆ, ಇದು ಒಂದು ಕುಟುಂಬದ ಗೌರವದ ವಿಷಯವಲ್ಲ, ಬದಲಾಗಿ ಇಡೀ ದೇಶದ ದಲಿತ ಸಮುದಾಯದ ವಿಷಯ ಎಂದು ರಾಹುಲ್ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಅಲ್ಲದೆ, ಐಪಿಎಸ್ ಅಧಿಕಾರಿಯು ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಲು ರಾಜ್ಯದ ಪೊಲೀಸ್ ಅಧಿಕಾರಿಗಳು ಪೂರಣ್ ಕುಮಾರ್ ಮೇಲೆ ಆಯ್ದ ತಾರತಮ್ಯ ಎಸಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಘಟನೆಯು ದಲಿತರಿಗೆ ತಪ್ಪು ಸಂದೇಶವನ್ನು ರವಾನಿಸಿದೆ ಎಂದು ರಾಹುಲ್ ಒತ್ತಿ ಹೇಳಿದ್ದಾರೆ. ಅಲ್ಲದೆ, ಒಬ್ಬ ವ್ಯಕ್ತಿಯು ಎಷ್ಟೇ ಯಶಸ್ವಿಯಾದರೂ, ದಲಿತನಾಗಿರುವುದರಿಂದ ಅನ್ಯಾಯಕ್ಕೆ ಗುರಿಯಾಗುತ್ತಾರೆ ಎಂದು ಸೂಚಿಸುತ್ತದೆ. ಈ ವಿಷಯವು ದಿವಂಗತ ಐಪಿಎಸ್ ಅಧಿಕಾರಿಯ ಕುಟುಂಬದ ಘನತೆಯ ಬಗ್ಗೆ ಮಾತ್ರವಲ್ಲ, ಇಡೀ ದಲಿತ ಸಮುದಾಯದ ಗೌರವದ ಬಗ್ಗೆ ಎಂದು ರಾಹುಲ್ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ರಾಹುಲ್, ಮುಕ್ತ ಮತ್ತು ನ್ಯಾಯಯುತ ತನಿಖೆ ನಡೆಸುವ ಭರವಸೆಯನ್ನು ಉಳಿಸಿಕೊಳ್ಳಲು ಸಿಎಂ ಸೈನಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ದಿವಂಗತ ಅಧಿಕಾರಿಯ ಹೆಣ್ಣುಮಕ್ಕಳು ಅಪಾರ ಒತ್ತಡವನ್ನು ಎದುರಿಸುತ್ತಿದ್ದಾರೆ ಸಿಎಂ ವಿರುದ್ಧ ಕೆಂಡಕಾರಿದ್ದಾರೆ.
ನಾನು ವಿರೋಧ ಪಕ್ಷದ ನಾಯಕನಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹರಿಯಾಣ ಮುಖ್ಯಮಂತ್ರಿಯನ್ನು ಐಪಿಎಸ್ ಪೂರಣ್ ಕುಮಾರ್ ಅವರ ಹೆಣ್ಣುಮಕ್ಕಳಿಗೆ ನೀಡಿರುವ ಬದ್ಧತೆಯನ್ನು ಗೌರವಿಸಬೇಕು ಮತ್ತು ಅಂತ್ಯಕ್ರಿಯೆಯನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ರಾಹುಲ್ ಒತ್ತಾಯಿಸಿದ್ದಾರೆ. (ಏಜೆನ್ಸೀಸ್)