

ಬೆಂಗಳೂರು: ಸೋಮವಾರ ದಿಡೀರ್ ವರ್ಗಾವಣೆಗೊಂಡಿದ್ದ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ಅವರಿಗೆ ಸರ್ಕಾರ ಮಂಗಳವಾರ ಸ್ಥಾನ ತೋರಿಸಿದೆ.
ಕಾರ್ಮಿಕ ಇಲಾಖೆಯ ಪ್ರಭಾರ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರನ್ನು ನಿನ್ನೆ ಸಂಜೆ ಏಕಾಏಕಿ ವರ್ಗಾವಣೆ ಮಾಡಲಾಗಿತ್ತು. ಆದರೆ ಯಾವ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ ಎಂಬುದನ್ನೇ ನಮೂದಿಸಿರಲಿಲ್ಲ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದಲೂ ಅವರನ್ನು ಬಿಡುಗಡೆಗೊಳಿಸಲಾಗಿತ್ತು.
ಈ ವಿಷಯ ಸಾಮಾಜಿಕ ಜಾಲ ತಾಣಗಳಲ್ಲಿ, ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸ ಒದಗಿಸಿತ್ತು. ಯಾವುದೇ ಹುದ್ದೆ ತೋರಿಸದೆ ವರ್ಗಾವಣೆ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ಮಂಗಳವಾರ ಮಧ್ಯಾಹ್ನ ಮತ್ತೊಂದು ಆದೇಶ ಹೊರಡಿಸಿರುವ ಸರ್ಕಾರ, ಮಣಿವಣ್ಣನ್ ಅವರಿಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಹುದ್ದೆ ವಹಿಸಿಕೊಳ್ಳುವಂತೆ ಸೂಚಿಸಿದೆ.
ಮಣಿವಣ್ಣನ್ ಅವರ ವರ್ಗಾವಣೆಗೆ ಕಾರಣವೇನು ಎಂಬ ವಿಷಯವೂ ತೀವ್ರ ಚರ್ಚೆಗೆ ಒಳಗಾಗುತ್ತಿದೆ. ಮಣಿವಣ್ಣನ್ ಅವರು ಕರೊನಾ ಲಾಕ್‌ಡೌನ್ ಕಾಲದಲ್ಲಿ ಕಾರ್ಮಿಕರು ಮತ್ತು ನೌಕರರ ಪರ ವಹಿಸಿ ಕೆಲಸ ಮಾಡುತ್ತಿದ್ದುದು ಕೆಲವು ಕೈಗಾರಿಕೋದ್ಯಮಿಗಳಿಗೆ ಮತ್ತು ಬಿಲ್ಡರ್‌ಗಳಿಗೆ ನುಂಗಲಾರದ ತುಪ್ಪವಾಗಿತ್ತು. ಅವರ ಒತ್ತಡದಿಂದಾಗಿ ಸರ್ಕಾರ ಈ ದಿಢೀರ್ ನಿರ್ಧಾರ ಕೈಗೊಂಡಿತು ಎಂಬ ಆರೋಪಗಳೂ ಕೇಳಿಬಂದಿದೆ.