ರಾತ್ರಿ ವೇಳೆಯೂ ಕಾರ್ಯಾಚರಿಸುವ ಸಾಮರ್ಥ್ಯ ಪ್ರದರ್ಶನಕ್ಕಿಳಿದ ಭಾರತ

iaf
Published on

ನವದೆಹಲಿ: ಲಡಾಖ್​ ಪೂರ್ವಭಾಗದಲ್ಲಿ ಜಮಾವಣೆಗೊಳಿಸಿದ್ದ ಸೇನೆಯನ್ನು ಚೀನಾ ಹಿಂಪಡೆದುಕೊಳ್ಳುತ್ತಿದೆ. ತನ್ಮೂಲಕ ಈ ಪ್ರದೇಶದಲ್ಲಿ ಶಾಂತಿಯ ಮರುಸ್ಥಾಪನೆಗೆ ಸಹಕರಿಸುತ್ತಿರುವಂತೆ ತೋರುತ್ತಿದೆ. ಆದರೂ ಮೈಮರೆಯದ ಭಾರತೀಯ ವಾಯುಪಡೆ ರಾತ್ರಿ ವೇಳೆಯಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯದ ಪ್ರದರ್ಶನಕ್ಕೆ ಮುಂದಾಗಿದೆ.

ಲಡಾಖ್​ ವಲಯದಲ್ಲಿ ನೆಲೆಗೊಳಿಸಿರುವ ಮುಂಚೂಣಿ ನೆಲೆಯಲ್ಲಿನ ಯುದ್ಧವಿಮಾನಗಳು, ಅಟ್ಯಾಕ್​ ಹೆಲಿಕಾಪ್ಟರ್​ಗಳನ್ನು ಸೋಮವಾರ ರಾತ್ರಿ ವೇಳೆ ಹಾರಾಡಿಸಿ ಸಾಮರ್ಥ್ಯ ಪ್ರದರ್ಶಿಸಿತು. ಮಿಗ್​ 29, ಸುಖೋಯಿ-30, ಅಪಾಚೆ ಎಎಚ್​-64ಇ ಅಟ್ಯಾಕ್​ ಹೆಲಿಕಾಪ್ಟರ್​ಗಳು, ಸಿಎಚ್​-47ಎಫ್​ (ಐ) ಚಿನೋಕ್​ ಮಲ್ಟಿಮಿಷನ್​ ಹೆಲಿಕಾಪ್ಟರ್​ಗಳು ಮತ್ತಿತರ ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್​ಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.

ಈ ಕಾರ್ಯಾಚರಣೆಯ ಮೂಲಕ ಭಾರತ ತನ್ನ ಶತ್ರುಪಾಳೆಯದವರಿಗೆ ಎಲ್ಲ ವಾತಾವರಣದಲ್ಲೂ, ಎಲ್ಲ ಬಗೆಯ ಪ್ರದೇಶಗಳಲ್ಲೂ ಹಾಗೂ ಹಗಲು ಅಥವಾ ರಾತ್ರಿ ವೇಳೆ ತನ್ನ ಬತ್ತಳಿಕೆಯಲ್ಲಿರುವ ಯುದ್ಧವಿಮಾನಗಳು, ಹೆಲಿಕಾಪ್ಟರ್​ಗಳನ್ನು ಬಳಸಲು ಶಕ್ತವಾಗಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿಕೊಟ್ಟಿತು ಎಂದು ಏರ್​ ಚೀಫ್​ ಮಾರ್ಷಲ್​ (ನಿವೃತ್ತ) ಫಾಲಿ ಎಚ್​ ಮೇಜರ್​ ಹೇಳಿದ್ದಾರೆ.

ಯಾವುದೇ ವೃತ್ತಿಪರ ಸೇನೆ ದಿನದ 24 ಗಂಟೆಯೂ ದಾಳಿ ಮಾಡಲು ಸನ್ನದ್ಧವಾಗಿರಬೇಕಾಗುತ್ತದೆ. ಇದಕ್ಕೂ ಮುನ್ನ ಭಾರತೀಯ ವಾಯುಪಡೆಯಲ್ಲಿ ರಾತ್ರಿ ವೇಳೆ, ಗುಡ್ಡಗಾಡು ಪ್ರದೇಶಗಳಲ್ಲಿ ಹಾರಾಟ ಕೈಗೊಳ್ಳುವ ಸಾಮರ್ಥ್ಯದ ಯುದ್ಧವಿಮಾನಗಳ ಕೊರತೆ ಇತ್ತು. ಆದರೆ ಈಗ ಆ ಕೊರತೆಯನ್ನು ಬಹುತೇಕ ನೀಗಿಸಿಕೊಳ್ಳಲಾಗಿದೆ. ಲಡಾಖ್​ನಲ್ಲಿ ಸೋಮವಾರ ರಾತ್ರಿ ಕೈಗೊಳ್ಳಲಾಗಿದ್ದ ಹಾರಾಟಗಳೆಲ್ಲವೂ ಭಾರತೀಯ ವಾಯುಪಡೆಯ ತರಬೇತಿಯ ಭಾಗವಾಗಿತ್ತು ಹಾಗೂ ಪೈಲಟ್​ಗಳು ಮತ್ತಿತರ ಸಿಬ್ಬಂದಿಯ ಕೌಶಲವೃದ್ಧಿಯ ಉದ್ದೇಶ ಹೊಂದಿತ್ತು ಎಂದು ಏರ್​ ವೈಸ್​ ಮಾರ್ಷಲ್​ (ನಿವೃತ್ತ) ಮನಮೋಹನ್​ ಬಹಾದ್ದೂರ್​ ತಿಳಿಸಿದ್ದಾರೆ.

ಪರ್ವತಶ್ರೇಣಿಗಳ ಪ್ರದೇಶಗಳಲ್ಲಿ ರಾತ್ರಿ ವೇಳೆ ಹಾರಾಟ ಕೈಗೊಳ್ಳುವುದು ಸುಲಭದ ಮಾತಲ್ಲ. ಬೆಟ್ಟಗಳ ನೆರಳು ಪೈಲಟ್​ಗಳ ತಪ್ಪುಗ್ರಹಿಕೆ ಅವಕಾಶ ಮಾಡಿಕೊಡುತ್ತದೆ. ಜತೆಗೆ ಪ್ರಪಾತಗಳ ಆಳವನ್ನು ನಿಖರವಾಗಿ ಅಂದಾಜಿಸಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ಸೋಮವಾರ ಪೈಲಟ್​ಗಳಿಗೆ ತರಬೇತಿ ನೀಡಿ ಒಳ್ಳೆಯ ಕೆಲಸ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net