

ನವದೆಹಲಿ: ದಕ್ಷಿಣ ಆಫ್ರಿಕಾದಿಂದ ಶನಿವಾರ (ಫೆ.18) 12 ಚೀತಾಗಳು ಭಾರತಕ್ಕೆ ಬರಲಿವೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಮಹತ್ವ್ವಾಕಾಂಕ್ಷೆಯ ಕಾರ್ಯಕ್ರಮವಾದ ‘ಚೀತಾ ಮರುಪರಿಚಯ’ ಅಡಿ ಚೀತಾಗಳ ಎರಡನೇ ತಂಡ ಶುಕ್ರವಾರ ಸಂಜೆ ಜೋಹಾನ್ಸ್ಬರ್ಗ್ನ ಓ ಆರ್ ಟ್ಯಾಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದ್ದು, ಶನಿವಾರ ಬೆಳಗ್ಗೆ ಮಧ್ಯಪ್ರದೇಶದ ಗ್ವಾಲಿಯರ್ ಏರ್ಫೋರ್ಸ್ ಬೇಸ್ಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಅವುಗಳನ್ನು ಶಿಯೋಪುರಕ್ಕೆ ಸಾಗಿಸಲಾಗುತ್ತದೆ. ಇದಕ್ಕಾಗಿ ಭಾರತೀಯ ವಾಯುಪಡೆಯು ಮುಚ್ಚಿದ ಬಾಗಿಲುಗಳೊಂದಿಗೆ ಹೆವಿ ಲಿಫ್ಟ್ ಹೆಲಿಕಾಪ್ಟರ್ಗಳನ್ನು ಸಿದ್ಧವಿರಿಸಿದೆ. ಈ ಹೆಲಿಕಾಪ್ಟರ್ಗಳ ಮೂಲಕ ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಕೊಂಡೊಯ್ಯಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷದ ಸೆಪ್ಟೆಂಬರ್ 17ರಂದು, ತಮ್ಮ 72ನೇ ಹುಟ್ಟುಹಬ್ಬದಂದು ಕುನೋ ರಾಷ್ಟ್ರೀಯ ಉದ್ಯಾನವನದ ಕ್ವಾರಂಟೈನ್ ಆವರಣದಲ್ಲಿ ನಮೀಬಿಯಾದಿಂದ ತರಿಸಲಾಗಿದ್ದ ಐದು ಹೆಣ್ಣು, ಮೂರು ಗಂಡು ಚೀತಾಗಳನ್ನು ಬಿಡುಗಡೆ ಮಾಡಿದ್ದರು. ಪ್ರಸ್ತುತ ಕುನೊದಲ್ಲಿ ಎಂಟು ಚೀತಾಗಳು ಪ್ರತಿ ಮೂರು -ನಾಲ್ಕು ದಿನಗಳಿಗೊಮ್ಮೆಪ್ರಾಣಿಯನ್ನು ಬೇಟೆಯಾಡಿ ಕೊಲ್ಲುತ್ತಿವೆ ಮತ್ತು ಉತ್ತಮ ಆರೋಗ್ಯ ಹೊಂದಿವೆ. ಅನಾರೋಗ್ಯಕ್ಕೀಡಾಗಿದ್ದ ಹೆಣ್ಣು ಚೀತಾವೊಂದು ಸೂಕ್ತ ಚಿಕಿತ್ಸೆ ನಂತರ ಚೇತರಿಸಿಕೊಂಡಿದೆ.
ಚೀತಾಗಳು ಎಲ್ಲಿವೆ?
ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಬೋಟ್ಸ್ವಾನಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚೀತಾಗಳು ವಾಸಿಸುತ್ತಿವೆ. ನಮೀಬಿಯಾವು ವಿಶ್ವದಲ್ಲೇ ಅತಿ ಹೆಚ್ಚು ಚೀತಾಗಳನ್ನು ಹೊಂದಿದೆ.
ಭಾರತದಲ್ಲಿ ಚೀತಾಗಳ ಕಣ್ಮರೆ
ಭಾರತವು ಈ ಹಿಂದೆ ಏಷ್ಯಾದ ಚೀತಾಗಳಿಗೆ ನೆಲೆಯಾಗಿತ್ತು. ಆದರೆ 1952ರಲ್ಲಿ ಈ ಪ್ರಾಣಿಗಳು ದೇಶದಲ್ಲಿ ವಿನಾಶಗೊಂಡಿವೆ ಎಂದು ಘೋಷಣೆ ಮಾಡಲಾಯಿತು. ಅತಿಯಾದ ಬೇಟೆ ಮತ್ತು ಆವಾಸಸ್ಥಾನದ ನಷ್ಟದಿಂದಾಗಿ ಭಾರತದಿಂದ ಸಂಪೂರ್ಣವಾಗಿ ನಾಶವಾದ ಏಕೈಕ ದೊಡ್ಡ ಮಾಂಸಾಹಾರಿ ಪ್ರಭೇದವಾಗಿದೆ. ಛತ್ತೀಸ್ಗಢದ ಕೊರಿಯಾ ಜಿಲ್ಲೆಯ ಸಾಲ್ ಅರಣ್ಯದಲ್ಲಿ 1948ರಲ್ಲಿ ಕೊನೆಯ ಚೀತಾ ಸಾವನ್ನಪ್ಪಿತು.
ಮಹತ್ವದ ಒಪ್ಪಂದ
ಭಾರತ ಮತ್ತು ದಕ್ಷಿಣ ಆಫ್ರಿಕಾ ಕಳೆದ ವರ್ಷದ ಜನವರಿಯಲ್ಲಿ ಆಫ್ರಿಕನ್ ದೇಶದಿಂದ ಚೀತಾಗಳನ್ನು ಸಾಗಿಸಲು ಒಡಂಬಡಿಕೆ ಮಾಡಿಕೊಂಡಿದ್ದವು. ಫೆಬ್ರವರಿಯಲ್ಲಿ 12 ಚೀತಾಗಳನ್ನು ತರಿಸಿಕೊಂಡ ನಂತರ ಮುಂದಿನ ಎಂಟರಿಂದ 10 ವರ್ಷಗಳವರೆಗೆ ಪ್ರತಿ ವರ್ಷ 12 ಚೀತಾಗಳನ್ನು ತರಿಸಿಕೊಳ್ಳುವ ಯೋಜನೆ ಇದೆೆ ಎಂದು ಪರಿಸರ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ವನ್ಯಜೀವಿ ಸಂಸ್ಥೆಯು ಸಿದ್ಧಪಡಿಸಿದ ‘ಭಾರತದಲ್ಲಿ ಚಿರತೆಯ ಮರುಪರಿಚಯಕ್ಕಾಗಿ ಕ್ರಿಯಾ ಯೋಜನೆ’ ಪ್ರಕಾರ ಹೊಸ ಚಿರತೆಗಳನ್ನು ಸ್ಥಾಪಿಸಲು ಸೂಕ್ತವಾದ ಸುಮಾರು 12-14 ಕಾಡು ಚೀತಾಗಳನ್ನು ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಇತರ ಆಫ್ರಿಕನ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ. 2020ರಲ್ಲಿ ಸುಪ್ರೀಂಕೋರ್ಟ್ ಆಫ್ರಿಕನ್ ಚೀತಾಗಳು ಹಾಗೂ ವಿಭಿನ್ನ ಉಪಜಾತಿಯ ಚೀತಾಗಳನ್ನು ಪ್ರಾಯೋಗಿಕ ಆಧಾರದ ಮೇಲೆ ಎಚ್ಚರಿಕೆಯಿಂದ ಆಯ್ಕೆ ಮಾಡಿದ ಸ್ಥಳಕ್ಕೆ ತರಬಹುದು ಎಂದು ತೀರ್ಪು ನೀಡಿದ ನಂತರ ಚೀತಾಗಳನ್ನು ಭಾರತಕ್ಕೆ ತರುವ ಪ್ರಯತ್ನಗಳು ವೇಗಗೊಂಡಿತು.