ಅಧಿಕಾರಿಗಳಿಗೆ ದೆವ್ವ ಬಿಡಿಸುವೆ

12.pyp..01 (1)
Published on

ಪಿರಿಯಾಪಟ್ಟಣ: ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕಾಲಹರಣ ಮಾಡದೆ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವಂತೆ ಶಾಸಕ ಕೆ.ಮಹದೇವ್ ತಾಕೀತು ಮಾಡಿದರು.

ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಗೆ ನಾನು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಹಲವು ಅಧಿಕಾರಿಗಳು ಗೈರು ಹಾಜರಾಗುತ್ತಿದ್ದು, ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.

ಪಟ್ಟಣದಲ್ಲಿ ದುರಸ್ತಿ ಕೇಂದ್ರ ತೆರೆಯಲಾಗಿದ್ದರೂ ವಿದ್ಯುತ್ ಪರಿವರ್ತಕಗಳ ದುರಸ್ತಿಗಾಗಿ ರೈತರನ್ನು ಕೆ.ಆರ್.ನಗರಕ್ಕೆ ಕಳುಹಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ವರ್ತನೆ ಪುನರಾವರ್ತನೆಯಾದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ‘ದೆವ್ವ’ ಬಿಡಿಸಬೇಕಾಗುತ್ತದೆ ಎಂದು ಗುಡುಗಿದರು.

ಸೆಸ್ಕ್ ಅಧಿಕಾರಿಗಳಲ್ಲಿ ಲಂಚಗುಳಿತನ ಹೆಚ್ಚುತ್ತಿದ್ದು, ಈ ಸಂಬಂಧ ಒಬ್ಬ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಅವರು ಇನ್ನು ನಮ್ಮ ತಾಲೂಕಿಗೆ ಬರುವ ಅಗತ್ಯವಿಲ್ಲ ಎಂದು ಎಇಇ ಕಲೀಂ ಅಹಮದ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಶಾಸಕರು, ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಲು 25 ವಿದ್ಯುತ್ ಪರಿವರ್ತಕಗಳನ್ನು ತರಿಸಲಾಗಿದ್ದು, ಇನ್ನೂ 50 ಪರಿವರ್ತಕ ತರಲಾಗುವುದು ಎಂದು ತಿಳಿಸಿದರು.

ಗಿರಿಜನ ಹಾಡಿ ನಿವಾಸಿಗಳ ವಿದ್ಯುತ್ ಸಮಸ್ಯೆ ಹೋಗಲಾಡಿಸಲು ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ ಮತ್ತು ಸೆಸ್ಕ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.

ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ, ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪಾ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ, ಜಿಪಂ ಸದಸ್ಯರಾದ ಪಿ.ರಾಜೇಂದ್ರ, ಕೆ.ಸಿ.ಜಯಕುಮಾರ್, ಕೆ.ಎಸ್. ಮಂಜುನಾಥ್, ಸಿ.ಮಣಿ, ಕೌಸಲ್ಯಾ ಇತರರಿದ್ದರು.

ಪಾರದರ್ಶಕವಾಗಿ ಮನೆ ವಿತರಿಸಿ: ವಿಧವೆಯರು, ಅಂಗವಿಕಲರು ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ಆಯ್ಕೆಯಾಗಿರುವ ಎಲ್ಲ ಫಲಾನುಭವಿಗಳಿಗೆ ಪಾರದರ್ಶಕವಾಗಿ ಮನೆಗಳನ್ನು ವಿತರಿಸುವಂತೆ ಶಾಸಕ ಕೆ.ಮಹದೇವ್ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿದೆಯೇ ಎಂಬುದನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸುವಂತೆ ಸೂಚಿಸಿದ ಅವರು, ಪಿಡಿಒಗಳ ಭ್ರಷ್ಟಾಚಾರ ಹೆಚ್ಚಿದ್ದು ಈ ಬಗ್ಗೆ ಜಿಪಂ ಸಿಇಒಗೆ ದೂರು ನೀಡುವಂತೆ ತಾಲೂಕು ಪಂಚಾಯಿತಿ ಇಒ ಡಿ.ಸಿ.ಶ್ರುತಿ ಅವರಿಗೆ ಸೂಚಿಸಿದರು.

ಒತ್ತುವರಿ ಸ್ಥಳಗಳಲ್ಲಿ ನಿವೇಶನ ರಚಿಸಿ: ತಾಲೂಕಿನಾದ್ಯಂತ ಆಗಿರುವ 156 ಕೆರೆಗಳ ಒತ್ತುವರಿಯನ್ನು ಮೂರು ತಿಂಗಳೊಳಗೆ ತೆರವುಗೊಳಿಸಬೇಕು. ಒತ್ತುವರಿದಾರರು ಯಾವುದೇ ಪಕ್ಷದ ಮುಖಂಡರಾಗಿದ್ದರೂ ಮುಲಾಜು ತೋರಬಾರದು ಎಂದು ಶಾಸಕರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸೂರು ರಹಿತರಿಗೆ ನಿವೇಶನ ನೀಡಲು ಹಲವು ವರ್ಷಗಳಿಂದ ಸಾಧ್ಯವಾಗಿಲ್ಲ. ಇನ್ನು ಮೂರು ತಿಂಗಳಲ್ಲಿ ಒತ್ತುವರಿ ತೆರವುಗೊಳಿಸಿದ ಜಾಗಗಳಲ್ಲಿ ನಿವೇಶನಗಳನ್ನು ರಚಿಸಿ ಸೂರು ರಹಿತರಿಗೆ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವಿದ್ಯಾಸಂಸ್ಥೆಯಿಂದ ವಿರುದ್ಧ ದೂರು: ಗಿರಗೂರಿನ ಮಿಳಿಂದ ವಿದ್ಯಾಸಂಸ್ಥೆ ಅಂದಾಜು 9 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಾ.ಪಂ. ಸದಸ್ಯ ಎಸ್.ರಾಮು ಆರೋಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಒತ್ತುವರಿಯನ್ನು ಕೂಡಲೆ ತೆರವುಗೊಳಿಸಿ, ಅಲ್ಲಿ ಆಶ್ರಯ ನಿವೇಶನಗಳನ್ನು ರಚಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net