ಬಾನು ಮುಷ್ತಾಕ್ ದಸರಾ ಉದ್ಘಾಟಿಸಿದರೆ ಸಂತೋಷ

ಬಾನು ಮುಷ್ತಾಕ್ ದಸರಾ ಉದ್ಘಾಟಿಸಿದರೆ ಸಂತೋಷ
Published on

ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬಿದ್ದು, ಈಗಲಾದರೂ ಹಾಸನ ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹಿಸಿದರು.

ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಈಗಲಾದರೂ ಕೆಲಸ ಮಾಡಲಿ ಎಂದು ಆಶಿಸುತ್ತೇನೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಾನು ಮುಷ್ತಾಕ್ ನಮ್ಮ ಜಿಲ್ಲೆಯ ಮಹಿಳೆ, ಜತೆಗೆ ಹೋರಾಟಗಾರ್ತಿ. ಅವರು ದಸರಾ ಉದ್ಘಾಟನೆ ಮಾಡಿದರೆ ನನಗೆ ಸಂತೋಷ. ಈ ವಿಚಾರದಲ್ಲಿ ಹಿಂದು-ಮುಸ್ಲಿಂ ಎಂಬ ಭೇದಭಾವ ಮಾಡಬಾರದು. ಹಿಂದು-ಮುಸ್ಲಿಂ ಎಂದು ಬೇರ್ಪಡಿಸುವುದು ಸೂಕ್ತವಲ್ಲ. ಯಾರಾದರೂ ವಿರೋಧ ಮಾಡಲಿ. ಹಿಂದು, ಮುಸ್ಲಿಂ ಯಾವುದೂ ಇಲ್ಲ, ನಾವೆಲ್ಲ ಭಾರತೀಯರು ಎಂದರು.

25 ಕೋಟಿ ರೂ. ವೆಚ್ಚ ಮಾಡಿ ಮುಸ್ಲಿಂ ಏರಿಯಾದಲ್ಲಿ ರಸ್ತೆ ಮಾಡಿಸಿದ್ದೇನೆ. ನಾನು ಓಟಿಗಾಗಿ ರಸ್ತೆ ಮಾಡಲಿಲ್ಲ. 40 ವರ್ಷದಿಂದ ಕಾಂಗ್ರೆಸ್ ಮಾಡದ ಕೆಲವನ್ನು ನಾನು ಶಾಸಕನಾಗಿ ಮಾಡಿದ್ದೇನೆ. ಓಟು ಕೊಡಲ್ಲ ಅಂತ ಕೆಲಸ ಮಾಡದೆ ಇರಲು ಆಗುತ್ತದೆಯೇ? ಎಂದರು.

ರಾಜಕೀಯದಲ್ಲಿ ಏಳುಬೀಳು ಇದ್ದೇ ಇರುತ್ತದೆ. ಜಿಲ್ಲೆಯ ಮಹಿಳೆಗೆ ಒಂದು ಅವಕಾಶ ಕೊಟ್ಟಿದ್ದಾರೆ. ಬಾನು ಮುಷ್ತಾಕ್ ಅವರು ದೇವೇಗೌಡರ ಕಾಲದವರು. ಇದರಲ್ಲಿ ರಾಜಕೀಯ ಬೆರೆಸಬಾರದು. ವಿರೋಧವನ್ನೂ ಮಾಡಬಾರದು. ಅಬ್ದುಲ್ ಕಲಾಂ ರಾಷ್ಟ್ರಪತಿ ಆಗಿರಲಿಲ್ಲವೇ? ದೇವೇಗೌಡರು ಅವರನ್ನು ಹೇಗೆ ನಡೆಸಿಕೊಂಡರು ಎಂದು ಹೇಳಿದರು.

ಧರ್ಮಸ್ಥಳದ ವಿಷಯದ ಬಗ್ಗೆ ಈಗ ಹೇಳಲ್ಲ. ರಾಜ್ಯ ಸರ್ಕಾರ ತನಿಖೆ ನಡೆಸುತ್ತಿದೆ. ಧರ್ಮಸ್ಥಳದ ಬಗ್ಗೆ ನಮ್ಮದೇ ಆದ ಗೌರವವಿದೆ. ಕೆಲವರು ಅದರ ಶಕ್ತಿ ಹಾಳು ಮಾಡಲು ಹೋಗಿದ್ದಾರೆ. ಸರ್ಕಾರ ಅದಕ್ಕೆ ಅವಕಾಶ ಕೊಡಬಾರದಿತ್ತು ಎಂದು ಹೇಳಿದರು.

ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳವನ್ನು ಸರಿಯಾಗಿ ನಡೆಸಿಕೊಂಡು ಬಂದಿದ್ದಾರೆ. ರಾಜಕೀಯ ಮಾಡದೆ ಎಲ್ಲರನ್ನೂ ಸಮನಾಗಿ ನಡೆಸಿಕೊಂಡು ಬಂದಿದ್ದಾರೆ. ತಪ್ಪು ಮಾಡಿದಾಗ ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡಿ ಅಂತಾರೆ. ಮಂಜುನಾಥಸ್ವಾಮಿಗೆ ಅಪಾರ ಶಕ್ತಿ ಇದೆ. ಆ ದೇವರ ಶಕ್ತಿ ಬಗ್ಗೆ ಮಾತನಾಡುವ ಶಕ್ತಿಯಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net