ಬೊಮ್ಮಾಯಿ ಸಂಪುಟದಲ್ಲಿ ನಾನು ಮಂತ್ರಿಯಾಗುವುದಿಲ್ಲ: ಜಗದೀಶ ಶೆಟ್ಟರ್

1111
Published on

ಬೆಂಗಳೂರು: ಸದ್ಯದಲ್ಲೇ ರಚನೆಯಾಗಲಿರುವ ರಾಜ್ಯ ಸಚಿವ ಸಂಪುಟಕ್ಕೆ ತಾವು ಸೇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈ ವಿಷಯ ತಿಳಿಸಿದ್ದೇನೆ. ನಾನು ಮಾಜಿ ಸಿಎಂ ಮತ್ತು ಹಿರಿಯ ಆಗಿರುವುದರಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ಇದು ನನ್ನ ವೈಯಕ್ತಿಕ ನಿರ್ಧಾರ ಎಂದು ಅವರು ಹೇಳಿದ್ದಾರೆ.

ನಾನು ಕೆಳಮಟ್ಟದಿಂದ ಬೆಳೆದು ಬಂದ ಒಬ್ಬ ಕಾರ್ಯಕರ್ತ. ಮೇಲ್ಮಟ್ಟದ ಹುದ್ದೆಗಳನ್ನು ನಿರ್ವಹಿಸಿದ್ದೇನೆ. ಪಕ್ಷವನ್ನು ಕಟ್ಟಿದ್ದೇನೆ. ಈ ಹಂತದಲ್ಲಿ ಸಚಿವನಾಗಲು ನಾನು ಒಪ್ಪುವುದಿಲ್ಲ. ಪಕ್ಷದ ಕೆಲಸವನ್ನು ಹೈಕಮಾಂಡ್‌ನವರು ಕೊಟ್ಟರೆ ಸಂತೋಷದಿಂದ ನಿರ್ವಹಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಶೆಟ್ಟರ್ ಅವರ ಈ ನಿರ್ಧಾರದ ಕುರಿತು ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಅದು ನನ್ನ ಗಮನಕ್ಕೆ ಬಂದಿಲ್ಲ. ಸಚಿವ ಸಂಪುಟ ರಚನೆ ಕುರಿತು ಸದ್ಯದಲ್ಲೇ ದೆಹಲಿಗೆ ಹೋಗಿ ಬಿಜೆಪಿ ವರಿಷ್ಠ ನಾಯಕರ ಜತೆ ಚರ್ಚಿಸುತ್ತೇನೆ ಎಂದಷ್ಟೇ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net