ಶಿಕ್ಷಕರ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸುವೆ

Published on

ನಂಜನಗೂಡು: ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಸೋಮವಾರ ಶಿಕ್ಷಕರ ಸಮಸ್ಯೆಗಳನ್ನು ಆಲಿಸಲು ನಂಜನಗೂಡಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಭೇಟಿ ನೀಡಿದರು.

ಕಟ್ಟಡ ನವೀಕರಣದ ಬಗ್ಗೆ ಚರ್ಚಿಸಲು ಸಂಘದ ಅಧ್ಯಕ್ಷ ಡಾ.ದೀಪು ಅವರೊಂದಿಗೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ನಾಲ್ಕು ವಿಭಾಗಗಳಿರುವ ಶಾಲೆಗಳಲ್ಲಿ ಒಬ್ಬ ಗಣಿತ ಶಿಕ್ಷಕರನ್ನು ಹೆಚ್ಚುವರಿ ನೇಮಕಾತಿ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.

ಸಂಘದ ಕಾರ್ಯದರ್ಶಿ ಎಚ್.ಎಸ್.ಮಹೇಶ್ ಮಾತನಾಡಿ, ಶಿಕ್ಷಕರು ಸುಮಾರು ಎರಡು-ಮೂರು ವರ್ಷಗಳಿಂದ ವೈದ್ಯಕೀಯ ವೆಚ್ಚದ ಮರುಪಾವತಿ ಆಗಿಲ್ಲ. ಶೀಘ್ರವೇ ಬಿಡುಗಡೆ ಮಾಡಬೇಕು. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿಕ್ಷಕರಿಗೆ ಪ್ರೋತ್ಸಾಹಧನ ಇದುವರೆಗೂ ಜಮೆ ಆಗಿರುವುದಿಲ್ಲ. ಶಿಕ್ಷಕರ ವರ್ಗಾವಣೆಯಲ್ಲಿ ಸಾಕಷ್ಟು ದೋಷಗಳು ಕಂಡುಬಂದಿದ್ದು ಅದರಲ್ಲಿಯೂ ಕಡ್ಡಾಯ ವರ್ಗಾವಣೆಯನ್ನು ಮೊದಲು ಮಾಡಿ ನಂತರ ಸಾಮಾನ್ಯ ವರ್ಗಾವಣೆಯನ್ನು ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಸಹ ಶಿಕ್ಷಕರಿಂದ ಮುಖ್ಯಶಿಕ್ಷಕರಿಗೆ ಬಡ್ತಿ ನೀಡುವ ವಿಚಾರವಾಗಿ ಚರ್ಚಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ವರ್ಗಾವಣೆಗೊಂಡು ಬೇರೆ ಸ್ಥಳಕ್ಕೆ ಹೋದಂತಹ ಸಂದರ್ಭದಲ್ಲಿ ಈ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ಸ್ಥಳದ ಶಿಕ್ಷಕರ ಸಿಆರ್ ಫಾರಂಗೆ ಸಹಿ ಹಾಕಲು ಹಾಲಿ ಇರುವಂತಹ ಶಿಕ್ಷಣಾಧಿಕಾರಿ ನಿರಾಕರಿಸಿರುತ್ತಾರೆ ಎಂದು ಸಮಸ್ಯೆಗಳನ್ನು ತಿಳಿಸಿದರು.

ಶಿಕ್ಷಕರ ಸಮಸ್ಯೆಗಳನ್ನ ಆಲಿಸಿದ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಮಾತನಾಡಿ, ನಾನು ಈ ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ಶಿಕ್ಷಕರು ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಸಮಸ್ಯೆಗಳನ್ನ ನಿವಾರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಂತಹದ್ದೇ ಸಂದರ್ಭದಲ್ಲಿ ನನಗೆ ದೂರವಾಣಿ ಮುಖಾಂತರ ಕರೆ ಮಾಡಿ ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಬಗೆಹರಿಸುತ್ತೇನೆ. ಹಾಗೆಯೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಫಣಿರಾಜ್ ಅವರಿಗೆ ಶಿಕ್ಷಕರ ಸಮಸ್ಯೆಗಳನ್ನ ಕೂಡಲೇ ಬಗೆಹರಿಸಬೇಕೆಂದು ಸೂಚಿಸಿದರು.

ಬಳಿಕ ನಂಜನಗೂಡು ನಗರಸಭೆ ಆಯುಕ್ತ ವಿಜಯ್‌ಕುಮಾರ್ ಅವರನ್ನು ಆಹ್ವಾನಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ ಶೌಚಗೃಹ ನಿರ್ಮಿಸುವಂತೆ ಸೂಚಿಸಿದರು. ಬಳಿಕ ವಿಜಯಕುಮಾರ್ ಮಾತನಾಡಿ, ಸ್ವಚ್ಛತೆ ದೃಷ್ಟಿಯಿಂದ ನಗರಸಭೆಯಿಂದ ಏನು ಮಾಡಿಕೊಡಬೇಕು ಅದನ್ನು ಮಾಡಿಕೊಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಅನುದಾನಿತ ಶಾಲೆಯ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್ ಮಾತನಾಡಿ, ನಮ್ಮ ಅನುದಾನಿತ ಶಾಲೆಗಳಲ್ಲಿ ಸಾಕಷ್ಟು ಸಮಸ್ಯೆಗಳು ಮನೆ ಮಾಡಿವೆ. ಆದ್ದರಿಂದ ಶಾಲೆಯಲ್ಲಿರುವ ಶೌಚಗೃಹ, ಪೀಠೋಪಕರಣಗಳ ಸಮಸ್ಯೆ, ಸರಿಯಾದ ಸಮಯಕ್ಕೆ ಸಂಬಳವಾಗದೆ ಎರಡು ಮೂರು ತಿಂಗಳು ನಿಧಾನವಾಗುತ್ತಿದೆ. ಇದರಿಂದ ಸಾಕಷ್ಟು ಶಿಕ್ಷಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗೆ ಹತ್ತು ಹಲವು ಸಮಸ್ಯೆಗಳಿದ್ದು ಈ ಸಮಸ್ಯೆಗಳನ್ನ ಬಗೆಹರಿಸಿಕೊಡಬೇಕಾಗಿ ಮನವಿ ಮಾಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಡಾ.ದೀಪು, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮ ರತ್ನಾಕರ, ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನಂಜಪ್ಪ , ನಂಜನಗೂಡು ತಾಲೂಕು ಅಧ್ಯಾಪಕರ ಸಂಘದ ಉಪಾಧ್ಯಕ್ಷ ಸತೀಶ್ ದಳವಾಯಿ, ಅನುದಾನಿತ ಶಾಲೆಗಳ ಅಧ್ಯಕ್ಷ ಮಹೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸದಸ್ಯ ರಾಜಪ್ಪ ತಗಡೂರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಂಜನಗೂಡು ಶಾಖೆಯ ಪದಾಧಿಕಾರಿಗಳಾದ ಹನುಮಂತರಾಜು, ರಂಗನಾಥ್, ಪ್ರಕಾಶ್, ತೋಯಿದ್ ಅತ್ತಾರ್, ಶಿಕ್ಷಕರು ಭಾಗವಹಿಸಿದ್ದರು.

ನಂಜನಗೂಡಿನ ಶಿಕ್ಷಕರ ಸಂಘಕ್ಕೆ ವಿಧಾನ ಪರಿಷತ್ ಸದಸ್ಯ ಕೆ ವಿವೇಕಾನಂದ ಮಂಗಳವಾರ ಭೇಟಿ ನೀಡಿ ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net