ನಾನು ನಿಮ್ಮ ಜೊತೆಗಿರುವೆನು

succuss
Published on
ನಿರಾಶಾದಾಯಕ ಹಾಗೂ ನಕಾರಾತ್ಮಕ ಸುದ್ದಿಗಳನ್ನೇ ಕೇಳುವ ಈ ಕಾಲದಲ್ಲಿ ಸುವಾರ್ತೆಗಾರ ಮತ್ತಾಯನ ಮಾತುಗಳು ಆಶಾಕಿರಣ ಹಾಗೂ ಭರವಸೆಯ ಬೆಳಕಾಗಿವೆ. ಈ ಸುವಾರ್ತೆಯಲ್ಲಿ ಕಷ್ಟ, ನಷ್ಟ, ಸೋಲು, ಒತ್ತಡ ಹಾಗೂ ಖಿನ್ನತೆಯಲ್ಲಿರುವ ಎಲ್ಲರಿಗೂ ದೇವರು ಹೇಳುತ್ತಾರೆ: ಹೆದರಬೇಡಿ. ನೀವು ಅನೇಕ ಗುಬ್ಬಚ್ಚಿಗಳಿಗಿಂತಲೂ ಬೆಲೆಯುಳ್ಳವರಾಗಿದ್ದೀರಿ. ಸೋಲು, ಕಷ್ಟ ನಷ್ಟಗಳು ಜೀವನದ ಅಂತ್ಯವಲ್ಲ. ಅವು ಯಶಸ್ಸಿನ ಮೆಟ್ಟಿಲುಗಳು. ಅವು ಯಶಸ್ಸಿನ ಕಡೆಗೆ ಒಂದು ತಿರುವು ಮಾತ್ರ. ನೆನಪಿರಲಿ, ಸುರಂಗದ ಕೊನೆಗೆ ಬೆಳಕಿನ ಕಿರಣಗಳಿವೆ. ಆದುದರಿಂದ ಭಯಪಡಬೇಡಿ. ಆಶಾವಾದಿಗಳಾಗಿರಿ.’

ಈ ಮಾತುಗಳಿಗೆ ಪೂರಕವಾಗಿ ನಿದರ್ಶನಗಳನ್ನು ನೋಡೋಣ. ಉತ್ತರ ಪ್ರದೇಶದ ಅರುಣಿಮಾ ಸಿನ್ಹ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ. 2011ರಲ್ಲಿ ಅವರು ರೈಲಿನಲ್ಲಿ ದೆಹಲಿಗೆ ಹೋಗುತ್ತಿದ್ದಾಗ ಕಳ್ಳರ ಕೈಗೆ ಸಿಲುಕಿ ಅವರ ಜೊತೆ ಸೆಣಸಾಡುವಾಗ ರೈಲಿನಿಂದ ಹೊರಗೆ ಎಸೆಯಲ್ಪಡುತ್ತಾರೆ. ಅವರ ಕಾಲಿನ ಮೇಲೆ ರೈಲು ಚಲಿಸಿ, ಕಾಲು ತುಂಡಾಗುತ್ತದೆ. ಎಲ್ಲವೂ ಮುಗಿಯಿತು ಎಂದು ಎಲ್ಲರೂ ನಿರಾಶೆಯ ಮಾತುಗಳನ್ನಾಡುವಾಗ ಅರುಣಿಮಾ ಮಾತ್ರ, ದೇವರಲ್ಲಿ ನಂಬಿಕೆ ಮತ್ತು ಆತ್ಮ ವಿಶ್ವಾಸ ದಿಂದ ಮೌಂಟ್ ಎವರೆಸ್ಟ್ ಏರುವ ಕನಸು ಕಾಣುತ್ತಾರೆ. ಕೃತಕ ಕಾಲಿನಲ್ಲಿ ಅಭ್ಯಾಸ ಮಾಡಿ ಮೇ 21, 2013ರಲ್ಲಿ ಆ ಸಾಧನೆ ಮಾಡುತ್ತಾರೆ. ಈ ಸಾಧನೆ ಹೇಗೆ ಸಾಧ್ಯವಾಯಿತು ಎಂದರೆ ಅವರು ಹೇಳಿದ ಮಾತು: ದೇವರಲ್ಲಿ ನಂಬಿಕೆ ಹಾಗೂ ಆತ್ಮ ವಿಶ್ವಾಸ.

ಮೊನ್ನೆ ತಾನೆ ಕೊನೆಗೊಂಡ ಇಂಗ್ಲೆಂಡ್-ಭಾರತ ಕ್ರಿಕೆಟ್ ಟೆಸ್ಟ್​ನ ಐದನೇ ಪಂದ್ಯದಲ್ಲಿ ಕೇವಲ 6 ರನ್ನಿನಿಂದ ಅಸಾಧ್ಯವಾದ ಗೆಲುವನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಮ್ಮದ್ ಸಿರಾಜ್ ಕೂಡ ಇದು ಹೇಗೆ ಸಾಧ್ಯವಾಯಿತು ಎಂದಾಗ ನೀಡಿದ ಉತ್ತರವೂ ಅದೇ- ದೇವರಲ್ಲಿ ನಂಬಿಕೆ ಹಾಗೂ ಆತ್ಮ ವಿಶ್ವಾಸ. ಇದರ ಸಂದೇಶವೇನೆಂದರೆ, ಸೋಲಿನ ನೆರಳಲ್ಲಿ ಹಾಗೂ ಒತ್ತಡದ ಸಮಯದಲ್ಲಿ ಭಯಪಡಬೇಡಿ. ದೇವರ ದೃಷ್ಟಿಯಲ್ಲಿ ನೀವು ಬಹಳ ಬೆಲೆಯುಳ್ಳವರಾಗಿದ್ದೀರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net