

Amir Khan: ಬಾಲಿವುಡ್ ಅಂಗಳದಲ್ಲಿ ತಮ್ಮ ಪಾತ್ರಗಳ ಆಯ್ಕೆ, ಅಮೋಘ ನಟನೆಯಿಂದಲೇ ಭಾರತೀಯ ಸಿನಿಪ್ರೇಕ್ಷಕರ ಮನಗೆದ್ದಿರುವ ನಟ ಅಮೀರ್ ಖಾನ್, ಆಗಾಗ್ಗೆ ಜಾಲತಾಣಗಳಲ್ಲಿ ಸದ್ದು ಮಾಡುತ್ತಾರೆ. ಒಂದು ತಮ್ಮ ಹೇಳಿಕೆಗಳಿಂದ ಅಥವಾ ಕೌಟುಂಬಿಕ ವಿಚಾರಗಳಿಂದ ಮುನ್ನೆಲೆಗೆ ಬರುವ ಅಮೀರ್, ಈ ಬಾರಿ ತಮ್ಮ ಚಿತ್ರವೊಂದರ ಸೋಲಿನಿಂದ ಆದ ನೋವು, ಖಿನ್ನತೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಜೀವನದಲ್ಲಿ ತಮ್ಮ ಸಿನಿಮಾಗಳು ಸೋತಾಗ ಆದ ದುಃಖ, ಖಿನ್ನತೆ ಬಗ್ಗೆ ಮನಬಿಚ್ಚಿ ಮಾತನಾಡಿರುವ ಅಮೀರ್ ಖಾನ್, "ನನ್ನ ಚಿತ್ರಗಳು ಕೆಲಸ ಮಾಡದೆ, ಸೋಲನ್ನು ಕಂಡಾಗ ಭಾರೀ ಬೇಸರವಾಗಿದೆ. ಅತೀವ ನೋವು ಕಾಡಿದೆ. ಒಂದು ಚಿತ್ರ ತಯಾರಿಸುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ನಾವು ಹಾಕಿದ ಪ್ಲ್ಯಾನ್ಗಳು ಅಂದುಕೊಂಡಂತೆ ಸಾಗುವುದಿಲ್ಲ. 2022ರಲ್ಲಿ ರಿಲೀಸ್ ಆದ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ನನ್ನ ಅಭಿನಯದ ಮೇಲೆ ಹೆಚ್ಚಿನ ನಿರೀಕ್ಷೆಗಳಿತ್ತು. ಆದ್ರೆ, ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಕಮಾಲ್ ಮಾಡಲಿಲ್ಲ. ಇದು ಮನಸಿಗೆ ತೀರ ಘಾಸಿ ಮಾಡಿತು" ಎಂದರು.
"ಈ ಚಿತ್ರ ಸೋತಾಗ ತುಂಬ ದುಃಖವಾಯಿತು. ಇದೊಂದು ಸೋಲಿನಿಂದ ಕಂಗೆಟ್ಟ ನಾನು ಒಂದೆರೆಡು ವಾರಗಳ ಕಾಲ ಖಿನ್ನತೆಗೆ ಒಳಗಾಗಿದ್ದೆ. ಇದಾದ ಬಳಿಕ ನನ್ನ ಚಿತ್ರತಂಡದೊಂದಿಗೆ ಕುಳಿತು, ಎಲ್ಲಿ ತಪ್ಪಾಯಿತು ಎಂಬುದನ್ನು ಚರ್ಚಿಸಿದೆ. ಅದರಿಂದ ಒಂದಷ್ಟು ಕಲಿತೆ. ನಾನು ಮಾಡುವ ತಪ್ಪುಗಳನ್ನು ಅರಿಯಲು ಪ್ರಯತ್ನಿಸುತ್ತೇನೆ. ಏಕೆಂದರೆ, ಈ ತಪ್ಪುಗಳು ನನ್ನನ್ನು ಗಟ್ಟಿಯಾಗಿಸುವುದರ ಜತೆಗೆ ಮತ್ತೊಂದು ಹಂತಕ್ಕೆ ನೂಕುತ್ತದೆ" ಎಂದಿದ್ದಾರೆ.
2022ರ ಆಗಸ್ಟ್ನಲ್ಲಿ ತೆರೆಕಂಡ ಆಮಿರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಚಿತ್ರವು ಚಿತ್ರತಂಡದ ನಿರೀಕ್ಷೆಗೆ ತಕ್ಕಂತೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗುವುದರ ಜತೆಗೆ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿಯೂ ವಿಫಲವಾಯಿತು. ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಕೇವಲ 60 ಕೋಟಿ ರೂ.ಗಳನ್ನು ಗಳಿಸಿತು. ಇದು ಚಿತ್ರತಂಡ ಮೇಲೆ ಭಾರೀ ಪ್ರಭಾವ ಬೀರಿತು ಎಂಬುದರಲ್ಲಿ ಎರಡನೇ ಮಾತಿಲ್ಲ,(ಏಜೆನ್ಸೀಸ್).