

ಕೊಚ್ಚಿ: ಇಡೀ ಮಲಯಾಳಂ ಚಿತ್ರರಂಗವನ್ನೇ (Cinema Industry) ಅಲ್ಲುಗಾಡಿಸಿದ ಜಸ್ಟಿಸ್ ಹೇಮಾ ಸಮಿತಿ ವರದಿ ದೇಶಾದ್ಯಂತ ಹೊಸ ಸಂಚಲವನ್ನ ಮೂಡಿಸಿದ್ದು, ಖ್ಯಾತ ನಟ, ನಿರ್ದೇಶಕ, ನಿರ್ಮಾಪಕರ ವಿರುದ್ಧ ಸರಣಿ ಆರೋಪಗಳು ಕೇಳಿ ಬರುತ್ತಿದ್ದು, ಈ ಸಂಬಂಧ FIR ದಾಖಲಾಗಿದೆ. ಜಸ್ಟಿಸ್ ಹೇಮಾ ಸಮಿತಿ (Justice Hema Committee) ವರದಿ ಪ್ರಕಟಗೊಂಡ ಬೆನ್ನಲ್ಲೇ ಮಾಲಿವುಡ್ (Mollywood) ಮಾತ್ರವಲ್ಲದೇ ಬೇರೆ ಚಿತ್ರರಂಗದ ನಟ-ನಟಿಯರು ತಮ್ಮ ಮೇಲಾಗಿದ್ದ ದೌರ್ಜನ್ಯದ ಕುರಿತು ಮೌನ ಮುರಿಯುತ್ತಿದ್ದು, ತಮ್ಮ ಚಿತ್ರರಂಗಗಳಲ್ಲಿಯೂ ಹೇಮಾ ಕಮಿಟಿ (Hema Committee) ರೀತಿಯ ಸಮಿತಿ ರಚನೆ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.
2004ರಲ್ಲಿ ಚಿತ್ರರಂಗ ಪ್ರವೇಶಿಸಿದ ನಟಿ ಪದ್ಮಪ್ರಿಯಾ (PadmaPriya) ಹಲವು ಭಾಷೆಗಳಲ್ಲಿ ಖ್ಯಾತ ನಟರೊಟ್ಟಿಗೆ ತೆರೆ ಹಂಚಿಕೊಂಡಿದ್ದು, ಹಲವು ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ತಮಿಳು ಸಿನಿಮಾದ ಚಿತ್ರೀಕರಣ ಒಂದರಲ್ಲಿ ತಮಗಾದ ಕರಾಳ ಅನುಭವವನ್ನು ಕಾಲೇಜು ಕಾರ್ಯಕ್ರಮ ಒಂದರಲ್ಲಿ ಹಂಚಿಕೊಂಡಿರುವ ನಟಿ ತಮ್ಮನ್ನು ಹೇಗೆ ನಡೆಸಿಕೊಂಡರು ಎಂಬುದರ ಬಗ್ಗೆ ಮಾತನಾಡಿದ್ಧಾರೆ.
2007ರಲ್ಲಿ ಬಿಡುಗಡೆಯಾದ ಮೃಗಂ ಸಿನಿಮಾ ಚಿತ್ರೀಕರಣದ ಕೊನೆಯ ದಿನ ನಿರ್ದೇಶಕ ಸ್ವಾಮಿ ಮತ್ತು ಆತನ ಸ್ನೇಹಿತರು ಎಲ್ಲರ ಎದುರು ನನ್ನ ಕಪಾಳಕ್ಕೆ ಹೊಡೆದಿದ್ದರು. ಆ ಘಟನೆ ನನಗೆ ಆಘಾತವನ್ನುಂಟು ಮಾಡಿತು. ಆದರೆ ಮಾಧ್ಯಮಗಳು ಘಟನೆ ಬಗ್ಗೆ ಉಲ್ಟಾ ವರದಿ ಮಾಡಿದವು. ನಾನೇ ನಿರ್ದೇಶಕನ ಕಪಾಳಕ್ಕೆ ಹೊಡೆದಿದ್ದೇನೆ ಎಂದು ವರದಿ ಪ್ರಕಟಿಸಿದವು. ಈ ವಿಚಾರ ನನಗೆ ಆಘಾತವನ್ನುಂಟು ಮಾಡಿತು.
ಇದಾದ ಬಳಿಕ ನಾನು ತಮಿಳು ಸಿನಿಮಾ ಸಂಘಕ್ಕೆ ದೂರು ನೀಡಿದೆ. ಅದರಿಂದ ಯಾವುದೇ ಉಪಯೋಗ ಆಗಲಿಲ್ಲ. ಆ ನಂತರ ನನ್ನನ್ನೇ ಕೆಲವು ಸಿನಿಮಾಗಳಿಂದ ಕೈ ಬಿಡಲಾಯ್ತು. ಅದಾಗಲೇ ಒಪ್ಪಿಕೊಂಡಿದ್ದ ಸಿನಿಮಾಗಳಿಂದಲೂ ನನ್ನನ್ನು ತೆಗೆಯಲಾಯ್ತು. ಆದರೆ, ಮೃಗಂ ಸಿನಿಮಾದ ನಟನೆಗೆ ನನಗೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ನನ್ನ ನಟನೆಯನ್ನು ಜನ ಮೆಚ್ಚಿಕೊಂಡರು. ನನ್ನ ವಿರುದ್ಧ ಏನೇ ಪಿತೂರಿ ಮಾಡಿದರೂ ಸಹ ನಾನು ಮಾಡಿದ ಕೆಲಸದಿಂದ ನನಗೆ ಗೌರವ ಪ್ರಾಪ್ತಿಯಾಯ್ತು. ಲಿಂಗ ಭೇದದ ಬಗ್ಗೆ ನಾನು ವರ್ಷಗಳಿಂದಲೂ ಮಾತನಾಡುತ್ತಲೇ ಇದ್ದೇನೆ. ಒಬ್ಬ ಹೆಣ್ಣು ಮಗಳು ಯಾವುದಾದರು ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದರೆ. ಆಕೆಯೇ ದೊಡ್ಡ ಸಮಸ್ಯೆಯಾಗುತ್ತಾಳೆ ಎಂದು ನಟಿ ಪದ್ಮಪ್ರಿಯಾ ಹೇಳಿದ್ದಾರೆ.