

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮೆಚ್ಚಿ ಬಿಜೆಪಿಗೆ ಬಂದಿದ್ದೇನೆ, ಕೋವಿಡ್ ಕಾಲದಲ್ಲಿ ಅವರು, ನಿಭಾಯಿಸಿದ ಕಾರ್ಯವೈಖರಿ ಮೆಚ್ಚುಗೆಯಾಗಿ ನಾನು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಅವರದ್ದು ಸರಳ ಮತ್ತು ಜನಸಾಮಾನ್ಯರಿಗೆ ಹತ್ತಿರವಾದ ಸರಕಾರ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಉಡುಪಿಯಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನಾಗಿ ಬಿಜೆಪಿಯ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ, ಭಾರತೀಯ ಜನತಾ ಪಕ್ಷ ಯಾವುದೇ ಭರವಸೆಗಳನ್ನು ಕೊಟ್ಟಿಲ್ಲ.ಒಬ್ಬ ಕಾರ್ಯಕರ್ತನಾಗಿ ನಾನು ಬಿಜೆಪಿಯಲ್ಲಿ ದುಡಿಯುತ್ತೇನೆ ಎಂದರು.
2023ರ ಚುನಾವಣೆಯಲ್ಲಿ 150ಸೀಟು ಗೆಲ್ಲಿಸಿಕೊಳ್ಳಲು ನಾನು ನನ್ನ ಅಳಿಲುಸೇವೆಯನ್ನು ಮಾಡುತ್ತೇನೆ.ಕರ್ನಾಟಕ ರಾಜ್ಯದಲ್ಲಿ ಪಕ್ಷ ಎಲ್ಲಿ ಕೆಲಸ ಮಾಡಲು ಹೇಳುತ್ತದೆ ಅಲ್ಲಿ ಹೋಗಿ ಕೆಲಸ ಮಾಡುತ್ತೇನೆ.ವಿಶೇಷವಾಗಿ ಮೀನುಗಾರರು ಇರುವಂತಹ ಕ್ಷೇತ್ರದಲ್ಲಿ ಹೋಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಹೊಗಳಿದ ಬಿಜೆಪಿ ಬೈದಿರುವ ವೀಡಿಯೋಗಳ ಬಗ್ಗೆ ಮಾತನಾಡಿದ ಪ್ರಮೋದ್, ನಾನು ಕಾಂಗ್ರೇಸ್ ಪಕ್ಷಕ್ಕಾಗಿ ದುಡಿದಿದ್ದೇನೆ ಪಕ್ಷ ಕೂಡ ನನಗೆ ಹಲವಾರು ಕೊಡುಗೆಗಳನ್ನು ಕೊಟ್ಟಿದೆ.ಉಡುಪಿ ಜಿಲ್ಲೆಯ ಕಾಂಗ್ರೆಸ್ನ ಪರಿಸ್ಥಿತಿ ಕಳೆದ ಮೂರು ವರ್ಷಗಳಿಂದ ನನಗೆ ಹಿತಕರವಾಗಿಲ್ಲ.ನನಗೆ ಉಸಿರುಕಟ್ಟುವ ವಾತಾವರಣ ಇತ್ತು ಎಂದರು.
2018 ರಲ್ಲಿ ಹೇಳಿದ ಮಾತಿಗೂ ನಾನು ಈಗ ತೆಗೆದುಕೊಂಡ ನಿರ್ಧಾರಕ್ಕೂ ಯಾವುದೇ ಸಂಬಂಧಗಳು ಇಲ್ಲ, ವಿರೋಧ ಪಕ್ಷದಲ್ಲಿರುವಾಗ ಆಡಳಿತ ಪಕ್ಷವನ್ನು ಟೀಕೆ ಮಾಡುವುದು ನಮ್ಮ ಕರ್ತವ್ಯ.ಇಂದಿರಾ ಗಾಂಧಿ ವಿರುದ್ಧ ವೀರೇಂದ್ರ ಪಾಟೀಲ್ ಆರೋಪ ಮಾಡಿ, ನಿರಂತರವಾಗಿ ಟೀಕೆಗಳನ್ನು ಮಾಡಿದ್ದರು.ಎರಡೇ ವರ್ಷದಲ್ಲಿ ವೀರೇಂದ್ರ ಪಾಟೀಲ್ ಕಾಂಗ್ರೆಸ್ ಪಕ್ಷವನ್ನು ಸೇರಿ ಅಲ್ಲಿ ಮಂತ್ರಿಯಾಗುತ್ತಾರೆ.ಅಂದಿನ ವಿಡಿಯೋಗಳನ್ನು ಇಂದು ಹರಿಯಬಿಡುವುದು ಎಷ್ಟು ಸಮಂಜಸ ಎಂದು ಅವರೇ ಚಿಂತನೆ ಮಾಡಲಿ.ನಾನು ಬಿಜೆಪಿಗೆ ಸೇರಿದ್ದೇನೆ ಎಂದಿದ್ದಾರೆ.
ನನ್ನ ಹಲವಾರು ಬೆಂಬಲಿಗರು ಬಿಜೆಪಿ ಸೇರಲು ಆಸಕ್ತರಾಗಿದ್ದಾರೆ.ಬೂತ್, ಗ್ರಾಮೀಣ ಮಟ್ಟದಲ್ಲಿ ಬಿಜೆಪಿಗೆ ಶಕ್ತಿ ತುಂಬಿದ ಕಾರ್ಯಕರ್ತರಿದ್ದಾರೆ.ಚುನಾವಣೆ ಬಂದಾಗ ಸ್ಪರ್ಧೆಯ ವಿಚಾರ ಚರ್ಚಿಸೋಣ.ಶಾಸಕ ರಘುಪತಿ ಭಟ್ ಅವರ ಒಪ್ಪಿಗೆ ಇಲ್ಲದಿದ್ದರೆ ನನಗೆ ಬಿಜೆಪಿಗೆ ಸೇರಲು ಆಗುತ್ತಿರಲಿಲ್ಲ.ಪಕ್ಷವನ್ನು ಬಿಟ್ಟು ಬಂದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವು ದುಃಖ ಆಗುತ್ತದೆ.ನನ್ನನ್ನ ಬಯ್ಯುವ ಮತ್ತು ಹೊಗಳುವ ಹಕ್ಕು ಎಲ್ಲರಿಗೂ ಇದೆ.ಹೊಗಳಿದಾಗ ನಾನು ಹಿಗ್ಗುವುದಿಲ್ಲ ತೆಗಳಿದಾಗ ಕುಗ್ಗುವುದಿಲ್ಲ ಎಂದರು. (ದಿಗ್ವಿಜಯ ನ್ಯೂಸ್)