

ನವದೆಹಲಿ: ಪತಿ ಎನ್.ಆರ್. ನಾರಾಯಣ ಮೂರ್ತಿ ಇನ್ಪೋಸಿಸ್ ಕಂಪನಿಯನ್ನು ಸ್ಥಾಪಿಸಲು ಆರಂಭಿಕ ಬಂಡವಾಳ ವಾಗಿ ತಾವು 10,000 ರೂಪಾಯಿ ಕೊಡುವಾಗ ಬಹಳ ರಿಸ್ಕ್ ತೆಗೆದುಕೊಂಡಿದ್ದಾಗಿ ರಾಜ್ಯ ಸಭೆ ಸದಸ್ಯರಾಗಿ ನೂತನವಾಗಿ ಪ್ರಮಾಣವಚನ ಸ್ವೀಕರಿಸಿರುವ ಸುಧಾ ಮೂರ್ತಿ ಹೇಳಿದ್ದಾರೆ. ತಮ್ಮಲ್ಲಿದ್ದ 10,250 ರೂಪಾಯಿ ಪೈಕಿ 250 ರೂಪಾಯಿಯನ್ನು ಉಳಿತಾಯವಾಗಿ ತಾವು ಇಟ್ಟುಕೊಂಡಿದ್ದನ್ನು ಸುಧಾ ಮೂರ್ತಿ ನೆನಪಿಸಿಕೊಂಡಿದ್ದಾರೆ. ನಾರಾಯಣ ಮೂರ್ತಿಯವರ ಹಿಂದಿನ ಪ್ರಯತ್ನಗಳು ವಿಫಲವಾಗಿದ್ದರಿಂದ ‘ರಿಸ್ಕ್’ ತೆಗೆದುಕೊಳ್ಳುತ್ತಿದ್ದೇನೆ ಎಂಬುದು ತಮ್ಮ ಭಾವನೆಯಾಗಿತ್ತು ಎಂದು ಸುಧಾ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
1981ರಲ್ಲಿ ನಾರಾಯಣ ಮೂರ್ತಿ ಸಾಫ್ಟ್ವೇರ್ ಕಂಪನಿ ಸ್ಥಾಪಿಸುವ ಪ್ರಸ್ತಾಪ ಮುಂದಿಟ್ಟಾಗ, ತಾವಿಬ್ಬರೂ ಉತ್ತಮ ವೇತನ ಬರುವ ಉದ್ಯೋಗದಲ್ಲಿದ್ದೇವೆ ಎಂದು ತಾನು ಅವರಿಗೆ ಹೇಳಿದ್ದಾಗಿ 73 ವರ್ಷದ ನೂತನ ಸಂಸದೆ ಹೇಳಿದ್ದಾರೆ. ಆಗ, ನಿಮ್ಮ ಒಪ್ಪಿಗೆಯಿಲ್ಲದೆ ತಾನು ಮುಂದುವರಿಯುವುದಿಲ್ಲ ಎಂದು ಪತಿ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ. ‘ನನ್ನ ಉಳಿತಾಯದಲ್ಲಿ ಕೇವಲ 10,250 ರೂಪಾಯಿ ಇತ್ತು. ನನಗಾಗಿ 250 ರೂ. ಉಳಿಸಿಕೊಂಡು ಮಿಕ್ಕಿದ್ದನ್ನು ಪತಿಗೆ ಕೊಟ್ಟಿದ್ದೆ’ ಎಂದು ಹೇಳಿದ್ದಾರೆ. ಸಾಫ್ಟ್ರಾನಿಕ್ಸ್ ಎಂಬ ಕಂಪನಿ ಆರಂಭಿಸುವ ಯತ್ನದಲ್ಲಿ ಪತಿ ಸೋತಿದ್ದೇ ಇದನ್ನು ಒಂದು ರಿಸ್ಕ್ ಎಂದು ಪರಿಗಣಿಸಲು ಕಾರಣ ಎಂದಿದ್ದಾರೆ.