ಜೆಡಿಎಸ್‌ನಲ್ಲಿ ಇನ್ನು ನಿಖಿಲ್ ಕುಮಾರಸ್ವಾಮಿ ಪರ್ವ|Nikhil is responsible for party organization

nikhil kumarswamy
Published on

ಬೆಂಗಳೂರು: ‘ನಾನು ಚುನಾವಣೆಯಲ್ಲಿ ಸೋತಿದ್ದೇನೆ ಅಷ್ಟೆ, ಸತ್ತಿಲ್ಲ(I just lost the election, not dead) . ನನ್ನ ಜೀವನವೇ ಹೋರಾಟ’ ಎಂದು ಎದೆತಟ್ಟಿ ಹೇಳಿದ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಗೆ ಪಕ್ಷದಲ್ಲಿ ಅದೃಷ್ಟ ಖುಲಾಯಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಎರಡು ಬಾರಿ ವಿಧಾನಸಭೆ, ಒಂದು ಬಾರಿ ಲೊಕಸಭೆ ಚುನಾವಣೆಯಲ್ಲಿ ಸತತ ಸೋಲು ಕಂಡರೂ ಕೆಚ್ಚೆದೆ ಪ್ರದರ್ಶಿಸಿದ ನಿಖಿಲ್ ಕುಮಾರಸ್ವಾಮಿಗೆ ಪಕ್ಷ ಸಂಘಟನೆ ಹೊರೆ ಹೊರಿಸುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸುತ್ತಿವೆ.

ಚನ್ನಪಟ್ಟಣ ಸೋಲು ಜೆಡಿಎಸ್ ಬಲವನ್ನೇ ಉಡುಗಿಸಿದೆ. ಈ ಚುನಾವಣೆಯನ್ನು ಪ್ರತಿಷ್ಠೆ ಹಾಗೂ ಸವಾಲಾಗಿ ಸ್ವೀಕರಿಸಿದ್ದ ಜೆಡಿಎಸ್ ದಿಗ್ಗಜರಿಗೆ ದೊಡ್ಡ ಏಟು ಕೊಟ್ಟಿದೆ. ಆದರೂ ನಿಖಿಲ್ ಕುಮಾರಸ್ವಾಮಿ ನಿರಂತರ ಹೋರಾಟ ಮುಂದುವರಿಸಿದ್ದಾರೆ. ಸೋಲಿಗೆ ಧೃತಿಗೆಡದೇ ಛಲದ ಮಾತನ್ನಾಡಿ ಕಾರ್ಯಕರ್ತರು ಸೋಲಿನ ಸುಳಿಯಿಂದ ಹೊರ ಬರಲು ಹುಮ್ಮಸ್ಸು ತುಂಬುತ್ತಿದ್ದಾರೆ. ನಿಖಿಲ್ ಸೋಲಿನಿಂದ ಆಘಾತಕ್ಕೊಳಗಾಗಿ ಯುವ ಕಾರ್ಯಕರ್ತನೊಬ್ಬ ಆತ್ಮಹತ್ಯೆಗೆ ಯತ್ನಿಸಿದಾಗಲೂ ನಿಖಿಲ್ ಕುಮಾರಸ್ವಾಮಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹಾಗೂ ಆತ್ಮವಿಶ್ವಾಸ ತುಂಬಿದ್ದಾರೆ.

‘ನನಗೆ ಕೇವಲ 36 ವರ್ಷ. ನನಗಿದು ಚಿಕ್ಕ ವಯಸ್ಸು ನಾನು ಮುಂದಿನ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗಬೇಕಿದೆ. ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನನ್ನನ್ನು ಬಳಸಿಕೊಳ್ಳಿ. ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತೇನೆ’ ಎಂದು ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭದಲ್ಲಿ ಆಡಿದ ಮಾತು ಅವರ ವಯಸ್ಸನ್ನೂ ಮೀರಿದ ರಾಜಕೀಯ ಪ್ರೌಢಿಮೆಗೆ ಸಾಕ್ಷಿಯಾಗಿವೆ.

‘ನನ್ನ ಜೀವನವೇ ಹೋರಾಟ. ನಾನು ಸಮುದ್ರದ ಅಲೆಗಳ ವಿರುದ್ಧ ಈಜುವ ಅಭ್ಯಾಸ ಹೊಂದಿದ್ದೇನೆ’ ಎಂಬ ನಿಖಿಲ್ ಅವರ ನಿಶ್ಚಯದ ಮಾತುಗಳು ಜೆಡಿಎಸ್ ನಾಯಕರಲ್ಲಿ ಹೊಸ ಭರವಸೆಯ ಹೊಳಹು ಮೂಡಿಸಿದೆ. ಭವಿಷ್ಯದ ನಾಯಕನ್ನಾಗಿ ಹೊರ ಹೊಮ್ಮಿಸಿದೆ.

ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ನಿಖಿಲ್‌ಗೆ ಪಕ್ಷ ಸಂಘಟನೆಯ ಹೊಣೆ ನೀಡುವ ಸುಳಿವನ್ನು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರೆ.

ನಿಖಿಲ್‌ಗೆ ಪಕ್ಷ ಸಂಘಟನೆ ಹೊಣೆ ನೀಡಿದರೆ ಯುವ ಮತದಾರರನ್ನು ಸೆಳೆಯುವ ಹಾಗೂ ಪಕ್ಷದಲ್ಲಿ ಯುವ ಹವಾ ಸೃಷ್ಟಿಸುವ ನಿರೀಕ್ಷೆ ಹೊಂದಿದ್ದಾರೆ. ಹಾಗಾಗಿ ನಿಖಿಲ್ ಅವರನ್ನು ಪಕ್ಷಕ್ಕೆ ಒಪ್ಪಿಸುತ್ತಿದ್ದು, ಮಾರ್ಗದರ್ಶನ ನೀಡುವ ಜವಾಬ್ದಾರಿ ನಿಮಗಿದೆ ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿರುವುದು ಪರೋಕ್ಷವಾಗಿ ಪಕ್ಷದ ರಾಜ್ಯ ನಾಯಕತ್ವ ನೀಡುವ ಸೂಕ್ಷ್ಮ ಸುಳಿವನ್ನು ಕುಮಾರಸ್ವಾಮಿ ಹೊರ ಹಾಕಿದ್ದಾರೆ.

ಪಕ್ಷ ಬಲವರ್ಧನೆ, ಸಂಘಟನೆ ದೃಷ್ಟಿಯಿಂದ ಸದಸ್ಯತ್ವ ನೋಂದಣಿ ಪುನರಾರಂಭವಾಗಬೇಕು. ಯುವಕರನ್ನು ಪಕ್ಷ ಸಂಘಟನೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಪಕ್ಷದಲ್ಲಿ ಯುವ ಹವಾ ಸೃಷ್ಟಿಸಬೇಕು ಎಂದು ಸೂಚ್ಯವಾಗಿ ನಿಖಿಲ್‌ಗೆ ನಿರ್ದೇಶ ನೀಡಿದ್ದಾರೆ. ಈ ಮಾತುಗಳು ನಿಖಿಲ್ ರಾಜ್ಯ ಜೆಡಿಎಸ್‌ನ ಮುಂಚೂಣಿ ನಾಯಕರಾಗಿ ಹೊರ ಹೊಮ್ಮಲು ಪೂರಕವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net