ನಿನ್ನ ಧ್ಯಾನ ಮರೆತು ಕೆಟ್ಟೆನು

1-67d1c435042be
Published on
ಮನಸ್ಸು ಯಾವಾಗಲೂ ಅಧೋಮುಖವಾಗಿ ಹರಿಯುತ್ತದೆ. ಬಸವಣ್ಣನವರು ತಿಳಿಸಿದಂತೆ, ಅಂದಣವನೇರಿದ ಸೊಣಗನಂತೆ ಕಂಡಡೆ ಬಿಡದು ಮುನ್ನಿನ ಸ್ವಭಾವವ. ಒಂದು ಉತ್ತಮ ಜಾತಿಯ ನಾಯಿಯನ್ನು ಒಬ್ಬ ಸಲುಹಿದ. ಅದಕ್ಕೆ ಮನುಷ್ಯ ಉಣ್ಣುವ ಆಹಾರಕ್ಕಿಂತ ಉತ್ತಮವಾದದ್ದನ್ನು ಕೊಡುತ್ತಿದ್ದ. ಒಮ್ಮೆ ಅದರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಊರಲ್ಲಿ ಅದರ ಮೆರವಣಿಗೆ ತೆಗೆದ. ಮೆರವಣಿಗೆ ಹೊರಟಿತು ದಾರಿಯ ಬಾಜು ಒಂದು ಎಲುಬಿನ ತುಂಡು ಕಾಣಿಸಿತು. ಮೆರವಣಿಗೆಯಿಂದ ಜಿಗಿದು ಆ ತುಂಡನ್ನು ನಾಯಿ ಹಿಡಿಯಿತು. ಹಾಗೆ ಮನಸ್ಸು ಕೂಡ.

ಶರಣರಾದ ಉರಿಲಿಂಗ ಪೆದ್ದಿ ತಮ್ಮ ವಚನದಲ್ಲಿ ಹೀಗೆ ತಿಳಿಸಿದ್ದಾರೆ: ‘ಎನ್ನ ಮನಸು ಹೊನ್ನು ಹೆಣ್ಣು ಮಣ್ಣು ಧ್ಯಾನಿಸಿ ನಿಮ್ಮನ್ನು ಮರೆತೆನು. ಆ ಕಾರಣ ನೀವು ನನ್ನನ್ನೂ ಮರೆತಿರಿ. ನೀವು ಮರೆತ ಕಾರಣ ನಿಮ್ಮ ಮೋಹತಪ್ಪಿ ನಾನು ಕೆಟ್ಟೆನು...’ ಹೊನ್ನು, ಮಣ್ಣು ಮತ್ತು ಹೆಣ್ಣಿನ ಆಸೆಗೆ ನೀನೇ ಕರ್ತೃ. ‘ತೇನವಿನಾ ತೃಣಮಪಿ ನಚಲತಿ’. ಜಗತ್ತಿನಲ್ಲಿ ಒಂದು ಹುಲ್ಲು ಕಡ್ಡಿ ಅಲುಗಾಡಬೇಕಾದರೆ ನಿನ್ನ ಅಪ್ಪಣೆ ಬೇಕು. ಇದು ನನಗೆ ತಿಳಿದಿದ್ದರೂ, ಮನದಲ್ಲಿ ಇದ್ದರೂ ಕೆಟ್ಟೆನು. ಈ ಕೇಡು ಒಂದೇ ಅಲ್ಲ, ಹಸಿವು, ತೃಷೆ, ವ್ಯಸನ, ವಿಷಯ ವಾಸನೆಗೆ ದಾಸನಾಗಿ, ಪಂಚೇಂದ್ರೀಯಗಳ ಕಾಟದಲ್ಲಿ ಸಿಲುಕಿ, ಅರಿಷಡ್ವೈರಿಗಳು ನನ್ನೊಳಗಿನ ಜ್ಞಾನವೆಂಬ ರತ್ನವನ್ನು ಕಳ್ಳತನ ಮಾಡುತ್ತಿವೆ.

ಮುಂದಾದರೂ ಇವುಗಳಿಗೆ ಆಸೆ ಮಾಡಿ ನಿಮ್ಮನ್ನು ಮರೆಯದಂತೆ ನನ್ನ ಮೇಲೆ ಕೃಪೆ ಮಾಡಿ’ ಎಂದು ಉರಿಲಿಂಗ ಪೆದ್ದಿಗಳು ದೇವರಲ್ಲಿ ಬೇಡಿಕೊಂಡಿದ್ದಾರೆ. ಈ ಭವ-ಬಂಧನದಿಂದ ಮುಕ್ತನಾಗಬೇಕಾದರೆ ಗುರು, ಲಿಂಗ ಮತ್ತು ಜಂಗಮನಲ್ಲಿ ನಿಷ್ಠೆ, ಕಾಯಕ ದಾಸೋಹ ಭಾವವಿರಬೇಕು. ಒಬ್ಬರ ಮನವ ನೋಯಿಸದಂತೆ, ಒಬ್ಬರ ಮನೆಯ ಘಾತವ ಮಾಡದಂತೆ ನಡೆಯಬೇಕು. ಶರಣರ ಸತ್ಸಂಗದಲ್ಲಿರಬೇಕು. ಆಗ ಇವುಗಳೆಲ್ಲದರಿಂದ ಬಿಡುಗಡೆಯಾಗಿ ಇಹ ಪರದಿ ಸುಖ ಹೊಂದಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net