

ಬೆಂಗಳೂರು: ನಾನು ಸರ್ಕಾರಿ ನೌಕರಳಾಗಿದ್ದೆ. ದೇವರಾಜ ಅರಸು ಅವರು ಸಿಎಂ ಆಗಿದ್ದಾಗ ಡಿ.ಬಿ.ಚಂದ್ರೇಗೌಡರು ನನ್ನನ್ನು ರಾಜಕೀಯಕ್ಕೆ ಕರೆ ತಂದರು. ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರ ಆಶೀರ್ವಾದದಿಂದ ನಾನು ರಾಜಕೀಯದಲ್ಲಿ ಮುಂದುವರಿದೆ ಎಂದು ಮಾಜಿ ಸಚಿವ ಮೋಟಮ್ಮ ಹೇಳಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು ದೇವರಾಜ ಅರಸು ಹಾಗೂ ಇಂದಿರಾ ಗಾಂಧಿ ಅವರ ನಡುವೆ ಭಿನ್ನಾಭಿಪ್ರಾಯವನ್ನು ಯಾರು ತಂದು ಹಾಕಿದರೋ ಗೊತ್ತಿಲ್ಲ. ಡಿ.ಬಿ.ಚಂದ್ರೇಗೌಡರು ಅರಸು ಹಾಗೂ ಇಂದಿರಾ ಗಾಂಧಿ ಅವರು ನಮ್ಮ ಎರಡು ಕಣ್ಣುಗಳಿದ್ದಂತೆ. ಅವರನ್ನು ಅಧಿಕಾರದಿಂದ ಇಳಿಸುವ ಹೊತ್ತಿನಲ್ಲಿ ನನ್ನನ್ನು ಮನೆಗೆ ಕರೆದಿದ್ದ ಅರಸು ಅವರು ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ ನೀನು ಮೂರನೆಯವಳು, ನಿನ್ನ ರಾಜಕೀಯ ಬೆಳವಣಿಗೆಗೆ ನಾನು ಬೆಂಬಲ ನೀಡುತ್ತೇನೆ ಎಂದಿದ್ದರು. ನನ್ನ ಮದುವೆಗೆ 10 ಸಾವಿರ ನೀಡಿ ಮದುವೆಗೆ ಬರುತ್ತೇನೆ ಎಂದು ಹೇಳಿದ್ದರು ಎಂದರು.
ಶೇ.33 ರಷ್ಟು ಮಹಿಳಾ ಮೀಸಲಾತಿ ತಂದ ಕಾರಣಕ್ಕೆ ಗ್ರಾಮೀಣ ಭಾಗದ ಅನೇಕ ಹೆಣ್ಣು ಮಕ್ಕಳು ರಾಜಕೀಯಕ್ಕೆ ಬಂದಿದ್ದಾರೆ. ಗಂಡ, ಮಗ ಹೇಳಿದಂತೆ ರಾಜಕೀಯ ನಿರ್ಧಾರ ತೆಗೆದುಕೊಳ್ಳಬಾರದು. ನಾವು ನಮ್ಮ ಸ್ವಂತ ಆಲೋಚನೆ ಬೆಳೆಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಶೇ.50 ರಷ್ಟು ಮಹಿಳಾ ಮೀಸಲಾತಿ ನೀಡುವುದಾಗಿ ಹೇಳಿದೆ. ಮಹಿಳೆಯರು ಕಾಂಗ್ರೆಸ್ ಪಕ್ಷದ ಪರವಾಗಿ ಇರಬೇಕು ಎಂದು ಹೇಳಿದರು.
ನಮ್ಮ ಪಕ್ಷದ ಇತಿಹಾಸ ತಿಳಿಯದ ಬಿಜೆಪಿಯವರು ತಾನು ಕಳ್ಳ ಪರರನ್ನು ನಂಬ ಎನ್ನುವ ಸ್ಥಿತಿಯಲ್ಲಿದ್ದಾರೆ. ಅವರೇ ಸರಿಯಿಲ್ಲ ಆದರೆ ನಮ್ಮ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಆಪರೇಷನ್ ಕಮಲ ಎನ್ನುವ ಭ್ರಷ್ಟಾಚಾರ ಹುಟ್ಟಲು ಬಿಜೆಪಿಯವರೇ ಕಾರಣ ಎಂದು ಟೀಕಿಸಿದರು.
ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕ್ಷುಲ್ಲಕ ಕಾರಣಕ್ಕೆ ದಾಳಿ ಮಾಡಲಾಗುತ್ತಿದೆ. ನನಗೆ ಶಾಸಕರ ಕೋಟಾ ಅಡಿ ನಿವೇಶನ ನೀಡಿದಾಗ ನಾವು ಅದನ್ನು ಬದಲಾವಣೆ ಮಾಡಿಕೊಂಡೆವು. ಇದರಲ್ಲಿ ತಪ್ಪೇನು ಇಲ್ಲ. ನಾವು ಪಕ್ಷದ ಪರವಾಗಿ ಸಂಕಷ್ಟದ ಕಾಲದಲ್ಲಿ ನಿಲ್ಲಬೇಕು. ಪಕ್ಷದ ಬೆಳವಣಿಗೆಗೆ ಎಲ್ಲರೂ ಕೊಡುಗೆ ನೀಡಬೇಕು ಎಂದು ಹೇಳಿದರು.