

ಬೆಂಗಳೂರು: ನನಗೆ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಗೊತ್ತು. ಆಣೆ ಪ್ರಮಾಣ, ರಾಹು ಕಾಲ, ಗುಳಿಕೆ ಕಾಲದ ಬಗ್ಗೆ ತಿಳಿದಿಲ್ಲ(I do not know the oath! Know the Constitution) ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ(HC Mahadevappa) ಹೇಳಿದರು.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿ.ಟಿ ರವಿಯನ್ನು ಆಣೆ ಪ್ರಮಾಣಕ್ಕೆ ಆಹ್ವಾನ ಮಾಡಿರುವ ಕುರಿತ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.
ನಾನು ಆಣೆ ಪ್ರಮಾಣ, ರಾಹು ಕಾಲ ಇದಕ್ಕೆಲ್ಲ ಹೋದವನೂ ಅಲ್ಲ, ಫಾಲೋ ಮಾಡಿದವನೂ ಅಲ್ಲ. ಬದಲಾಗಿ ವೈಜ್ಞಾನಿಕವಾಗಿ ಕಾನೂನು ಪ್ರಕಾರವಾಗಿ ಎಲ್ಲವೂ ನಡೆಯಬೇಕಾಗಿದೆ ಎಂದು ಹೇಳಿದರು.
ಆಣೆ ಪ್ರಮಾಣದ ಬಗ್ಗೆ ನನಗೆ ಗೊತ್ತಿಲ್ಲ, ಯಾರೂ ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ. ಸಿಎಂ ಸೇರಿ ಎಲ್ಲರೂ ಹೋಗುತ್ತಾರೆ. ಹೋಗುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ ತನಿಖೆ ವೈಜ್ಞಾನಿಕವಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಸಿಟಿ ರವಿ ಹೆಬ್ಬಾಳ್ಕರ್ ಗಲಾಟೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ಕೊಟ್ಟಿದೆ. ಸಿ.ಟಿ. ರವಿ ಅವರು ನೀಡಿರುವ ಹೇಳಿಕೆ ಗಮನಿಸಿ ಸಿಐಡಿ ಅಧಿಕಾರಿಗಳು ತನಿಖೆ ಮಾಡುತ್ತಾರೆ. ತುಚ್ಛ ಪದ ಬಳಸೋದು ಸರಿಯೇ? ವ್ಯಕ್ತಿಯ ತೇಜೋವಧೆ ಮಾಡೋದು ಸರಿಯೇ? ಎಂದು ಪ್ರಶ್ನಿಸಿದರು.
ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಗಾಂಧೀಜಿ ಎಐಸಿಸಿ ಅಧ್ಯಕ್ಷರಾಗಿ 100 ವರ್ಷ ಆಗಿದೆ. ಆ ಕಾರಣಕ್ಕೆ ಆ ಕಾರ್ಯಕ್ರಮ ಮಾಡಲಾಗುತ್ತಿದೆ. ಇದಕ್ಕೆ ಯಾರ ವಿರೋಧವೂ ಇಲ್ಲ. ಯಾರು ಬೇಕಾದರೂ ಬರಬಹುದು ಎಂದು ಮಹದೇವಪ್ಪ ಆಹ್ವಾನ ನೀಡಿದರು.