

ಬೆಂಗಳೂರು: "ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ, ಕೆಲವು ಮಾಧ್ಯಮಗಳು ಸುದ್ದಿ ತಿರುಚಿ ವಿವಾದ ಸೃಷ್ಟಿಸುತ್ತಿವೆ" ಎಂದು ಡಿಸಿಎಂ DK ಶಿವಕುಮಾರ್ ಹೇಳಿದರು.
ಲಾಲ್ ಬಾಗ್ ಉದ್ಯಾನದಲ್ಲಿ ಶನಿವಾರ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರೊಂದಿಗೆ ಸಂವಾದದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. "ನಾನು ಸಾರ್ವಜನಿಕರ ಭೇಟಿಗೆ ಬಂದಾಗ ಕೆಲವರು ನೀವು ಮುಖ್ಯಮಂತ್ರಿ ಆಗಬೇಕು, ಅ ಸಮಯ ಹತ್ತಿರ ಬರುತ್ತಿದೆಯೇ ಎಂದು ಕೇಳಿದರು. ಆದರೆ ಸಿಎಂ ಆಗುವ ಕಾಲ ಹತ್ತಿರ ಬರುತ್ತಿದೆ ಎಂದು ನಾನೇ ಹೇಳಿದ್ದೇನೆ ಎಂದು ಕೆಲವು ಮಾಧ್ಯಮಗಳು ಸುದ್ದಿ ತಿದ್ದಿ ಪ್ರಸಾರ ಮಾಡುತ್ತಿವೆ. ನೀವು ಹಾಗೆಲ್ಲ ಸುದ್ದಿ ತಿರುಚಿ ತೋರಿಸಬೇಡಿ" ಎಂದರು.
"ನಾನು ಸಿಎಂ ಹುದ್ದೆ ಅಲಂಕರಿಸಲು ಆತುರದಲ್ಲಿ ಇಲ್ಲ. ನಾನು ಇಲ್ಲಿಗೆ ಬಂದಿರುವುದು ಸಾರ್ವಜನಿಕರ ಸೇವೆ ಮಾಡಲು. ರಾಜಕಾರಣ ಮಾಡಲು ಅಲ್ಲ. ಜನರ ಸೇವೆ ಮಾಡಲು ಹಗಲು ರಾತ್ರಿ ತಿರುಗುತ್ತಿದ್ದೇನೆ. "ನಾನು ಆ ಹೇಳಿಕೆ ಎಲ್ಲಿ ಹೇಳಿದ್ದೇನೆ. ಮಾಧ್ಯಮಗಳು ರಾಜಕಾರಣ ಮಾಡುವುದು ಬೇಡ. ನಾನು ಆ ರೀತಿ ಹೇಳಿಲ್ಲ, ಅದರ ಅಗತ್ಯವೂ ನನಗೆ ಇಲ್ಲ. ನನಗೆ ನನ್ನ ಗುರಿ ಗೊತ್ತಿದೆ. ಭಗವಂತ ನನಗೆ ಯಾವಾಗ ಅವಕಾಶ ಕೊಡುತ್ತಾನೋ ಕೊಡಲಿ. ರಾಜ್ಯದ ಜನರ ಸೇವೆ ಹಾಗೂ ಬೆಂಗಳೂರಿನ ನಾಗರೀಕರಿಗೆ ಉತ್ತಮ ಆಡಳಿತ ನೀಡಲು ಶ್ರಮಿಸುತ್ತಿದ್ದೇನೆ" ಎಂದು ಹೇಳಿದರು.