ಈ ನಟನೊಂದಿಗೆ ಕೆಲಸ ಮಾಡಲು ಬಹಳ ಉತ್ಸಾಹದಿಂದ ಕಾಯ್ತಿದ್ದೇನೆ: ಹೃತಿಕ್ ರೋಷನ್​

ವಿಜಯವಾಣಿ - 2024-02-02T132115.124
Published on

ಮುಂಬೈ: ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾದ ಹೃತಿಕ್ ರೋಷನ್​ ಮತ್ತು ನಟಿ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಫೈಟರ್'​ ಸಿನಿಮಾ ಸದ್ಯ ಬಾಕ್ಸ್​ ಆಫೀಸ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕಡಿಮೆ ಅವಧಿಯಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಾಣುತ್ತಿರುವ ಈ ಚಿತ್ರದ ಯಶಸ್ಸಿನಲ್ಲಿ ನಟ ಹೃತಿಕ್​ ಮಾತನಾಡಿದ್ದು, ತಮ್ಮ ಮತ್ತೊಂದು ಸಿನಿಮಾ ಚಿತ್ರೀಕರಣ ಪ್ರಾರಂಭವಾಗಬೇಕು, ಅವರೊಂದಿಗೆ ಕೆಲಸ ಮಾಡುವ ಉತ್ಸಾಹ ಬಹಳ ಹೆಚ್ಚಿದೆ ಎಂದು ತಿಳಿಸಿದ್ದಾರೆ.

'ಆರ್​ಆರ್​ಆರ್' ಸಕ್ಸಸ್​ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಪಾಪ್ಯುಲರ್​ ನಟನಾಗಿ ಗುರುತಿಸಿಕೊಂಡ ಟಾಲಿವುಡ್​ ಸ್ಟಾರ್​ ಜೂ. ಎನ್​ಟಿಆರ್​, ಇದೀಗ ತಮ್ಮ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ 'ದೇವರ' ಚಿತ್ರದ ಚಿತ್ರೀಕರಣದಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಈ ಹಿಂದೆಯೇ ಘೋಷಣೆ ಮಾಡಿದಂತೆ ಬಾಲಿವುಡ್​ನ ಹೃತಿಕ್​ ಹಾಗೂ ಜೂ. ಎನ್​ಟಿಆರ್​ ಕಾಂಬಿನೇಷನ್​ನಲ್ಲಿ 'ವಾರ್​ 2' ತೆರೆಗೆ ಬರಲಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಈ ವಿಷಯ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

"ಫೈಟರ್ ಯಶಸ್ಸಿನ ಬಗ್ಗೆ ಮಾತನಾಡುತ್ತಿದ್ದ ಹೃತಿಕ್​ ರೋಷನ್​, 'ವಾರ್​ 2' ದೊಡ್ಡ ಆ್ಯಕ್ಷನ್ ಮತ್ತು ಪರಿಣಾಮಕಾರಿ ಸ್ಕ್ರಿಪ್ಟ್ ಅನ್ನು ಹೊಂದಿದೆ. ಇದು ಒಂದೊಳ್ಳೆ ಮನರಂಜನಾ ಚಿತ್ರವಾಗಿದೆ. ನಾನು ನಟ ಜೂನಿಯರ್ ಎನ್‌ಟಿಆರ್ ಜತೆ ಕೆಲಸ ಮಾಡಲು ಬಹಳ ಉತ್ಸುಕನಾಗಿದ್ದೇನೆ” ಎಂದು ಹೇಳಿದ್ದಾರೆ. ಈ ವಿಷಯ ತಿಳಿದ ಎನ್​ಟಿಆರ್ ಫ್ಯಾನ್ಸ್ ಭಾರೀ ಸಂತಸ ವ್ಯಕ್ತಪಡಿಸಿದ್ದು, ಇಬ್ಬರು ಸ್ಟಾರ್​ಗಳನ್ನು ಒಂದೇ ಸಿನಿಮಾದಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಚಿತ್ರವನ್ನು ಅಯಾನ್ ಮುಖರ್ಜಿ ನಿರ್ದೇಶಿಸುತ್ತಿದ್ದು, YRF ನಿರ್ಮಾಣ ಸಂಸ್ಥೆಯಡಿ ಚಿತ್ರ ನಿರ್ಮಾಣವಾಗುತ್ತಿದೆ. ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ಇದೇ ಫೆಬ್ರವರಿ ಮೂರನೇ ವಾರದಲ್ಲಿ ಶುರುವಾಗಲಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net