ಮೃತ ಟ್ರೈನಿ ವೈದ್ಯೆ ಸಾವಿಗೆ ನ್ಯಾಯ ಬೇಕಿದೆ; ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧ: ಮಮತಾ ಬ್ಯಾನರ್ಜಿ

ವಿಜಯವಾಣಿ - 2024-09-12T213345.137
Published on

ಕೊಲ್ಕತ್ತ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಹತ್ಯೆ ಘಟನೆಯ ತನಿಖೆ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್​ ಘೋಷ್​​ ಮತ್ತು ಸೆಕ್ಯೂರಿಟಿ ಆಫೀಸರ್​ ಆಗಿ ಕೆಲಸ ಮಾಡುತ್ತಿದ್ದ ಅಫ್ಸರ್ ಅಲಿ ಖಾನ್ ಹಾಗೂ ಬಿಪ್ಲಬ್ ಸಿಂಗ್ ಮತ್ತು ಸುಮನ್ ಹಜ್ರಾರನ್ನು ಸಿಬಿಐ ಅಧಿಕಾರಿಗಳು ಅರೆಸ್ಟ್​ ಮಾಡಿ, ತನಿಖೆಗೆ ಒಳಪಡಿಸಿದರು. ಸದ್ಯ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತಷ್ಟು ಚುರುಕುಗೊಳಿಸುವ ಮೂಲಕ ಮಗಳನ್ನು ಕಳೆದುಕೊಂಡ ಪೋಷಕರಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದೆ. ಆದ್ರೆ, ಈ ಮಧ್ಯೆ ಮೃತ ಟ್ರೈನಿ ವೈದ್ಯೆ ಪೋಷಕರು ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಆರೋಪ ಹೊರಿಸಿದ್ದು, ನಮ್ಮ ಮಗಳ ಕೇಸ್​ ಮುಚ್ಚಿಹಾಕಲು ಲಂಚ ಕೊಡಲು ಬಂದಿದ್ದರು ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಮೃತ ವೈದ್ಯೆಯ​ ತಾಯಿ, “ಮುಖ್ಯಮಂತ್ರಿ ಸುಳ್ಳು ಹೇಳುತ್ತಿದ್ದಾರೆ. ಪರಿಹಾರ ಕೊಡಿಸುತ್ತೇನೆ, ನಿಮ್ಮ ಮಗಳ ನೆನಪಿಗಾಗಿ ಏನಾದರೂ ಕಟ್ಟಿಕೊಳ್ಳಿ ಎಂದು ಹೇಳಿದ್ದರು. ನನ್ನ ಮಗಳಿಗೆ ನ್ಯಾಯ ಸಿಕ್ಕಾಗ ನಾನು ಬರ್ತಿನಿ, ಹಣ ಪಡಿತೀನಿ ಎಂದಿದ್ದೆ” ಎಂದು ಅಳಲು ತೋಡಿಕೊಂಡಿದ್ದರು. ಸದ್ಯ ನ್ಯಾಯಕ್ಕಾಗಿ ಪ್ರತಿಭಟನೆ ಮುಂದುವರೆಸಿರುವ ಜೂನಿಯರ್ ವೈದ್ಯರ ಗುಂಪು ಮತ್ತು ಮೃತ ವೈದ್ಯೆಯ ಪೋಷಕರು ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ಇನ್ನು ಈ ಎಲ್ಲಾ ಬೆಳವಣಿಗೆ ಗಮನಿಸಿದ ಮಮತಾ ಬ್ಯಾನರ್ಜಿ, "ಈ ಬಿಕ್ಕಟ್ಟು ಪರಿಹರಿಸಲು ನನ್ನ ರಾಜೀನಾಮೆ ಸಹಾಯ ಮಾಡುವುದಾದರೆ ನಾನು ಕೊಡಲು ಸಿದ್ಧ" ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಿಎಂ, “ರಾಜ್ಯದ ಜನರಿಗಾಗಿ ಹಾಗೂ ಮೃತ ವೈದ್ಯೆಗೆ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ನಾನು ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ಅತ್ಯಾಚಾರ-ಕೊಲೆಯಾದ ಆರ್‌ಜಿ ಕರ್ ಆಸ್ಪತ್ರೆಯ ಟ್ರೈನಿ ವೈದ್ಯೆಗೆ ನ್ಯಾಯ ದೊರಕಿಸಿ ಕೊಡಬೇಕಿದೆ" ಎಂದು ಹೇಳಿದ್ದಾರೆ.

ಸದ್ಯ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಜೂನಿಯರ್​ ಡಾಕ್ಟರ್ಸ್​​​, ಮೃತ ವೈದ್ಯೆಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಕೊನೆಗೊಳ್ಳುವುದಿಲ್ಲ, ನಾವು ಕೊನೆಗೊಳಿಸುವ ಮಾತೇ ಇಲ್ಲ ಎಂದಿದ್ದಾರೆ. ವೈದ್ಯರ ನಿರಂತರ ಮುಷ್ಕರದಿಂದ ರಾಜ್ಯದ ಬಹುತೇಕ ಆಸ್ಪತ್ರೆಗಳಲ್ಲಿ ರೋಗಿಗಳು ವೈದ್ಯರಿಲ್ಲದೆ ತೀವ್ರ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿಯವರೆಗೆ 27 ಸಾವು ಸಂಭವಿಸಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net