ಅಧಿಕಾರದ ರುಚಿ ನೋಡಲು ನಾನಿಲ್ಲಿ ಬಂದಿಲ್ಲ! 6 ತಿಂಗಳಷ್ಟೇ...; ಡೆಡ್​ಲೈನ್ ಕೊಟ್ಟ ನೇಪಾಳ ನೂತನ ಪಿಎಂ | Nepal New PM

Untitled design
Published on

Nepal New PM: 'ಜೆನ್​ಝಿ' ಪ್ರತಿಭಟನೆಯಿಂದ ಇದೀಗ  ಶಾಂತಿಯತ್ತ ಮರಳಿರುವ ನೇಪಾಳ, ಮಧ್ಯಂತರ ಪ್ರಧಾನಿಯನ್ನು ಪಡೆದಿರುವುದು ಹೊಸ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಸುಪ್ರೀಂಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು, ತಾವು ಮತ್ತು ತಮ್ಮ ತಂಡವು ಅಧಿಕಾರದಲ್ಲಿ ಆಸಕ್ತಿ ಹೊಂದಿಲ್ಲ ಎಂಬುದನ್ನು ನೇಪಾಳದ ಜನತೆಗೆ ಸ್ಪಷ್ಟಪಡಿಸಿದ್ದಾರೆ. ಮುಂದಿನ ಆರು ತಿಂಗಳಷ್ಟೇ ನಾವಿಲ್ಲಿರುವುದು ಎಂದು ಒತ್ತಿ ಹೇಳಿದ್ದಾರೆ.

ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ನನ್ನ ತಂಡ ಮತ್ತು ನಾನು ಇಲ್ಲಿ ಬಂದಿರುವುದು ಅಧಿಕಾರದ ದಾಹಕ್ಕೆ ಅಥವಾ ರುಚಿ ನೋಡಲು ಅಲ್ಲ. ಆರು ತಿಂಗಳಿಗಿಂತ ಹೆಚ್ಚು ಕಾಲ ನಾವಿಲ್ಲಿ ಇರುವುದಿಲ್ಲ. ಹೊಸ ಸಂಸತ್ತಿಗೆ ಜವಾಬ್ದಾರಿಯನ್ನು ಹಸ್ತಾಂತರಿಸುತ್ತೇವೆ. ಇಲ್ಲಿ ನಮಗೆ ನಿಮ್ಮ ಬೆಂಬಲದ ಅಗತ್ಯವಿದೆ. ನಿಮ್ಮೆಲ್ಲರ ಪ್ರೋತ್ಸಾಹವಿಲ್ಲದೆ ನಾವು ಯಶಸ್ವಿಯಾಗುವುದಿಲ್ಲ" ಎಂದು ಹೇಳಿದ್ದಾರೆ.

ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಮಾಜಿ ಪ್ರಧಾನಿ ಓಲಿ ಸರ್ಕಾರದ ವಿರುದ್ಧ ಜೆನ್​ಝಿ ಪ್ರತಿಭಟನೆಯನ್ನು ಮೆಚ್ಚಿದ ನೂತನ ಪಿಎಂ, ಈ ಪ್ರತಿಭಟನೆಯ ಜ್ವಾಲೆಯಲ್ಲಿ ದುರಂತ ಅಂತ್ಯ ಕಂಡವರನ್ನು ಹುತಾತ್ಮರು ಎಂದು ಪರಿಗಣಿಸೋಣ. ಮೃತರ ಕುಟುಂಬಕ್ಕೆ ನಾನು 1 ಮಿಲಿಯನ್ ನೇಪಾಳಿ ರೂಪಾಯಿ ಘೋಷಿಸುತ್ತೇನೆ ಮತ್ತು ಗಂಭೀರವಾಗಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಹಾಗೂ ಆರ್ಥಿಕವಾಗಿ ಸಹಾಯ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.

"ಪ್ರತಿಭಟನೆಯ ಹೆಸರಿನಲ್ಲಿ ನಡೆದ ಕೆಲವು ಘಟನೆಗಳನ್ನು ನೋಡಿದಾಗ, ಇದೆಲ್ಲವೂ ಪೂರ್ವನಿಯೋಜಿತ ಎಂದೆನಿಸಿತು. ಇದು ಪಿತೂರಿಯಿಂದ ನಡೆಸಿರುವುದು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಜೆನ್​ಝಿ ಆಕ್ರೋಶದಲ್ಲಿ ಸರ್ಕಾರಿ ಸೇರಿ ಖಾಸಗಿ ಆಸ್ತಿಗಳನ್ನು ಸುಟ್ಟುಹಾಕಲಾಗಿದೆ. ಧ್ವಂಸಗೊಳಿಸಿದವರ ವಿರುದ್ಧ ಸರ್ಕಾರ ಖಂಡಿತ ಕ್ರಮವನ್ನು ತೆಗೆದುಕೊಳ್ಳಲಿದೆ. ಯಾವುದಕ್ಕೆಲ್ಲ ಹಣದ ಸಹಾಯದ ಅಗತ್ಯವಿದೆಯೋ ಅದಕ್ಕೆ ಪೂರೈಕೆ ಮಾಡಲಾಗುವುದು" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net