

ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತರೂಢ ಮಹಾರಾಷ್ಟ್ರ ವಿಕಾಸ್ ಅಗಡಿ ಸರ್ಕಾರದ ರಿಮೋಟ್ ಕಂಟ್ರೋಲ್ ತಾವಾಗಿಲ್ಲ. ಅಷ್ಟೇ ಅಲ್ಲ, ಹೆಡ್ಮಾಸ್ಟರ್ ಕೂಡ ಆಗಿಲ್ಲ ಎಂದು ಎನ್ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.
ಶಿವಸೇನೆಯ ಮುಖವಾಣಿ ಸಾಮ್ನಾಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಸಾಮ್ನಾದಲ್ಲಿ ಶಿವಸೇನೆ ಹೊರತಾಗಿ ಬೇರೊಬ್ಬ ರಾಜಕೀಯ ನಾಯಕರ ಸಂದರ್ಶನ ಪ್ರಕಟವಾಗುತ್ತಿರುವುದು ಇದೇ ಮೊದಲಾಗಿದೆ.
ನಾನು ನೇಪಥ್ಯದಲ್ಲಿ ನಿಂತು ಸಿಎಂ ಉದ್ಧವ್ ಠಾಕ್ರೆ ಅವರನ್ನು ನಿಯಂತ್ರಿಸುತ್ತಿದ್ದೇನೆ ಎಂಬ ಮಾತು ಹಸಿ ಸುಳ್ಳು. ನಾನು ಹೆಡ್ಮಾಸ್ಟರ್ ಕೂಡ ಅಲ್ಲ. ಪ್ರಜಾತಂತ್ರ ವ್ಯವಸ್ಥೆ, ಸರ್ಕಾರ ಅಥವಾ ಆಡಳಿತಗಳು ರಿಮೋಟ್ ಕಂಟ್ರೋಲ್ ನೆರವಿನಿಂದ ಕಾರ್ಯನಿರ್ವಹಿಸುವುದಿಲ್ಲ. ಆ ರೀತಿ ಆಗುವುದೇನಿದ್ದರೂ ಪ್ರಜಾತಂತ್ರ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಎಂದು ರಷ್ಯಾದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಪರೋಕ್ಷವಾಗಿ ಉದಾಹರಣೆ ನೀಡಿ ಸ್ಪಷ್ಟಪಡಿಸಿದ್ದಾರೆ.
ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಆಕಸ್ಮಿಕವಲ್ಲ ಎಂದು ಸ್ಪಷ್ಟಪಡಿಸಿರುವ ಪವಾರ್, 2014ರಿಂದ 2019ರ ನಡುವಿನ ಬಿಜೆಪಿ-ಶಿವಸೇನೆ ಸರ್ಕಾರದ ಬಗ್ಗೆ ಮತದಾರರಲ್ಲಿ ಅಸಮಾಧಾನ ಮೂಡಿತ್ತು. ಹಾಗಾಗಿಯೇ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಕ್ಕೆ ಶಿವಸೇನೆ ಭಾರಿ ಬೆಲೆಯನ್ನೇ ತೆತ್ತಿತು ಎಂದು ಹೇಳಿದ್ದಾರೆ.
ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರ ಹೆಸರನ್ನು ಪ್ರಸ್ತಾಪಿಸದೆ, ಯಾವುದೇ ರಾಜಕೀಯ ನಾಯಕರಾಗಿರಲಿ. ಮತದಾರರನ್ನು ಎಂದೂ ಹಗುರವಾಗಿ ಪರಿಗಣಿಸಬಾರದು. ಇಂಥದ್ದೇ ತಪ್ಪು ಮಠಡಿದ್ದಕ್ಕಾಗಿ ಇಂದಿರಾ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಸರಿಯಾದ ಬೆಲೆಯನ್ನೇ ತೆತ್ತಿದ್ದರು ಎಂದು ತಿಳಿಸಿದ್ದಾರೆ.