

ಬೆಂಗಳೂರು: ಬಿಜೆಪಿ, ಜೆಡಿಎಸ್ ಮೈತ್ರಿ ವೈಯಕ್ತಿಕವಾಗಿ ನನಗೂ ವಿರೋಧವಿದೆ. ಅಧಿಕೃತವಾಗಿ ಮೈತ್ರಿಯಾದ ಬಳಿಕ ನಿರ್ಧಾರ ಮಾಡುತ್ತೇನೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವೈಯಕ್ತಿಕವಾಗಿ 20 ವರ್ಷದಿಂದ ಸೆಣಸಾಟ ಮಾಡಿಕೊಂಡು ಬಂದಿದ್ದೇವೆ. ಕಾಂಗ್ರೆಸ್-ಜೆಡಿಎಸ್ ಜತೆ ಮೈತ್ರಿ ನೋಡಿದ್ದೇನೆ. ಕಾಂಗ್ರೆಸ್‌ಗೆ ಜೆಡಿಎಸ್ ಮೊದಲಿನಿಂದಲೂ ವಿರೋಧವಿದೆ. ಯಾವತ್ತೂ ಕೂಡ ನಮ್ಮ ಹಾಗೂ ಅವರ ಕಾರ್ಯಕರ್ತರಿಗೆ ಹೊಂದಾಣಿಕೆ ಇಲ್ಲ. ಮಾನಸಿಕ ಕಿರುಕುಳ ಹತ್ತಿರದಿಂದ ನೋಡಿದ್ದೇನೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇತ್ತು. ಅವರು ಇವರಿಗೆ ಮತ ಹಾಕಲಿಲ್ಲ, ಇವರು ಅವರಿಗೆ ಮತ ಹಾಕಲಿಲ್ಲ. ಯಾರೂ ಕೂಡ ಈ ಬಗ್ಗೆ ವಯಕ್ತಿಕವಾಗಿ ಮಾತನಾಡುತ್ತಿಲ್ಲ. ಆದರೆ ಎಲ್ಲರಿಗೂ ಅಸಮಾಧಾನವಂತೂ ಇದ್ದೇ ಇದೆ. ನಮ್ಮ ಪಕ್ಷದಲ್ಲಿ ಯಾರನ್ನೂ ಕರೆದು ಚರ್ಚೆ ಮಾಡಿಲ್ಲ ಎಂದು ಹೇಳಿದರು.
ಬೆಂಬಲಿಗರು ಬಿಜೆಪಿ ಬಿಡುತ್ತಿರುವ ಕುರಿತ ಪ್ರಶ್ನೆಗೆ, ನನ್ನ ಕ್ಷೇತ್ರ ಅಷ್ಟೇ ಅಲ್ಲ, ಅಶೋಕ್, ಮುನಿರತ್ನ, ದಾಸರಹಳ್ಳಿ ಕ್ಷೇತ್ರಗಳಲ್ಲಿ ಹೋಗಿದ್ದಾರೆ. ನಾನು ಶೇ.100 ಬಿಜೆಪಿಯಲ್ಲಿ ಇದ್ದೀನೆ. ಆದರೆ ಮೈತ್ರಿ ಬಳಿಕ ಯೋಚನೆ ಮಾಡಬೇಕಿದೆ. 6 ಬಾರಿ ಜೆಡಿಎಸ್ ಜತೆ ಹೊಡೆದಾಡಿಕೊಂಡು ಬಂದಿದ್ದೇವೆ.
ಜೆಡಿಎಸ್ ಜತೆ ಮೈತ್ರಿಯಿಂದ ಬೇಸತ್ತು ಅನೇಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಯಾರೂ ನಾಲ್ಕು ಜನ ಕೂತು ಮಾತನಾಡಿದರೆ ಆಗಲ್ಲ ಎಂದು ಜೆಡಿಎಸ್ ಅಧ್ಯಕ್ಷರೇ ಹೇಳಿದ್ದಾರೆ. ನನ್ನ ಬಳಿಯೂ ಕೆಲವರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಸೋಮಶೇಖರ್ ಹೇಳಿದರು.