Hyundai : ಭಾರತದಲ್ಲಿ 32 ಸಾವಿರ ಕೋಟಿ ಹೂಡಿಕೆ: ಐಪಿಒಗೆ ಮುನ್ನ ಹ್ಯುಂಡೈ ಘೋಷಣೆ

hyundai
Published on

ನವದೆಹಲಿ: ದೇಶದ ಅತಿ ದೊಡ್ಡ ಐಪಿಒ ಆರಂಭಿಸಲಿರುವ ಕಾರು ತಯಾರಿಕಾ ಕಂಪನಿ ಹ್ಯುಂಡೈ(Hyundai) ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) 2032ರ ವೇಳೆಗೆ ಭಾರತದಲ್ಲಿ ಸುಮಾರು 32 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ.

ದೇಶದ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಮಾರುಕಟ್ಟೆಯು 2030 ರ ವರೆಗೆ ಬಲವಾದ ಮತ್ತು ಸ್ಥಿರವಾದ ಬೆಳವಣಿಗೆಯನ್ನು ಹೊಂದುವ ನಿರೀಕ್ಷೆಯಿದೆ ಎಂದು ಕಂಪನಿ ಹೇಳಿದೆ.

ಕಂಪನಿಯು ಎಸ್​ಇಬಿಐ ಗೆ ಸಲ್ಲಿಸಿದ ಐಪಿಒ ದಾಖಲೆಗಳ ಪ್ರಕಾರ, ಈ ಮೊತ್ತವನ್ನು ಭವಿಷ್ಯದ ಬಂಡವಾಳ ಅಗತ್ಯಗಳಿಗಾಗಿ ಹೂಡಿಕೆ ಮಾಡಲಾಗುತ್ತದೆ. ಇದು ಭೂಮಿ, ಆಸ್ತಿ ಮತ್ತು ಸಲಕರಣೆಗಳ ಖರೀದಿಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಪ್ರಯಾಣಿಕ ವಾಹನಗಳ ಹೊಸ ಮಾದರಿಗಳ ಬಿಡುಗಡೆಗೆ ಸಂಬಂಧಿಸಿದ ಅಮೂರ್ತ ಆಸ್ತಿಗಳನ್ನು ಖರೀದಿಸಲಾಗುತ್ತದೆ ಎಂದು ವಿವರಿಸಿದೆ.

ಐಪಿಒ ದಾಖಲೆಗಳ ಪ್ರಕಾರ, ಕಂಪನಿಯು 2024ರ ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 559 ಕೋಟಿ ರೂಪಾಯಿ ಮೌಲ್ಯದ ಆಸ್ತಿ, ಸ್ಥಾವರ ಮತ್ತು ಉಪಕರಣಗಳನ್ನು ಖರೀದಿಸಿದೆ. ಸ್ಥಳೀಯ ಮಾರುಕಟ್ಟೆಯ ಮೇಲೆ ವಿವಿಧ ಕಂಪನಿಗಳ ಹೆಚ್ಚುತ್ತಿರುವ ಗಮನ ಮತ್ತು ಸರ್ಕಾರದ ಬೆಂಬಲದಿಂದಾಗಿ ಇವಿ ಮಾರುಕಟ್ಟೆ ಬೆಳೆಯುತ್ತಿದೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಉನ್ಸೂ ಕಿಮ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net