

ಇತ್ತೀಚೆಗೆ ಹೈದರಾಬಾದ್ನ ಮಹಿಳೆಯೋರ್ವರು ಬರೋಬ್ಬರಿ 139 ಜನರ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ, ಪೊಲೀಸರಿಗೆ ದೂರು ನೀಡಿದ್ದರು. ಆ 139 ಜನರಲ್ಲಿ ಬಹುಪಾಲು ಮಂದಿ ಉದ್ಯಮಿಗಳು, ಸಿನಿಮಾ ಮಂದಿ, ವಕೀಲರು, ವಿದ್ಯಾರ್ಥಿ ಸಂಘಟನೆಗಳ ಮುಖಂಡರು, ಗಣ್ಯರೇ ಸೇರಿದ್ದಾರೆ ಎಂದೂ ಹೇಳಿದ್ದರು.
ಆದರೆ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನನ್ನ ಆರೋಪ ಸುಳ್ಳು..ಎಂದು ಆ 25 ವರ್ಷದ ಮಹಿಳೆಯೇ ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ. ನಿನ್ನೆ ಸುದ್ದಿಗೋಷ್ಠಿ ನಡೆಸಿದ ಮಹಿಳೆ, ನಾನು ಹೀಗೆಲ್ಲ ಆರೋಪಿಸುವಂತೆ ರಾಜಶ್ರೀಕರ್ ರೆಡ್ಡಿ ಎಂಬಾತ ನನಗೆ ಹೇಳಿದ್ದ. ಬೆದರಿಕೆಯನ್ನೂ ಹಾಕಿದ್ದ. ಹಾಗಾಗಿ ಸುಳ್ಳು ಆರೋಪ ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: ಇಂದ್ರಜಿತ್ ಮಾಹಿತಿ ನೀಡಿದ್ದಾರಷ್ಟೇ, ಯಾವುದೇ ಪುರಾವೆಗಳನ್ನು ನೀಡಿಲ್ಲ: ಸಿಸಿಬಿ ಆಯುಕ್ತರ ಸ್ಪಷ್ಟನೆ
ನಾನು ಕೆಲಸ ಹುಡುಕುತ್ತಿದ್ದೆ. ಇದೇ ಸಮಯಕ್ಕೆ ರಾಜಶ್ರೀಕರ್ ರೆಡ್ಡಿ ಪರಿಚಯ ಆಯಿತು. ಉದ್ಯೋಗ ಕೊಡಿಸುತ್ತೇನೆ ಎಂದು ಹೇಳಿ, ನನ್ನನ್ನು ದೈಹಿಕವಾಗಿ ಬಳಸಿಕೊಂಡ. ಅದಾದ ಮೇಲೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. 139 ಮಂದಿಯ ವಿರುದ್ಧ ಅತ್ಯಾಚಾರ ಆರೋಪ ಹೊರಿಸುವಂತೆ ಅವನೇ ಒತ್ತಡ ಹೇರಿದ್ದ. ಹಿಂಸಿಸುತ್ತಿದ್ದ. ಹಾಗಾಗಿ ಸುಳ್ಳು ದೂರು ದಾಖಲಿಸಿದೆ ಎಂದು ಹೇಳಿದ್ದಾಳೆ.
ತನ್ನ ದೂರಿನಲ್ಲಿ ಉಲ್ಲೇಖಿಸಿದ್ದ ಇಬ್ಬರು ಸಿನಿಮಾ ನಟರ ಬಳಿಯೂ ಆಕೆ ಕ್ಷಮೆ ಕೋರಿದ್ದಾರೆ. ಅವರಿಗೂ..ನಾನು ಮಾಡಿದ ಆರೋಪಕ್ಕೂ ಸಂಬಂಧವಿಲ್ಲ. ಅವರಿಂದ ನನಗ್ಯಾವ ತೊಂದರೆಯೂ ಆಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮೈತ್ರಿ ಉರುಳಿಸಿದ್ದು ಡ್ರಗ್ ಮಾಫಿಯಾ : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ
ಯಾವ 139 ಜನರೂ ನನ್ನ ಮೇಲೆ ಅತ್ಯಾಚಾರ ಮಾಡಿಲ್ಲ. ಆದರೆ ಕೆಲವರು ಲೈಂಗಿಕ ಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಮಹಿಳೆಯ ಹೇಳಿಕೆಗಳನ್ನು ದಾಖಲಿಸಿಕೊಂಡು, ಪ್ರಕರಣದ ತನಿಖೆ ಮುಂದುವರಿಸುತ್ತೇವೆ ಎಂದು ಅಸಿಸ್ಟಂಟ್ ಕಮಿಷನರ್ ಶ್ರೀದೇವಿ ಹೇಳಿದ್ದಾರೆ. (ಏಜೆನ್ಸೀಸ್)