ಬಿರು ಬೇಸಗೆಯಿಂದಾಗಿ ಎಲ್ಲೆಡೆ ನೀರಿನ ಬರ ಎದುರಾಗಿದೆ. ಜನಸಾಮಾನ್ಯರಷ್ಟೇ ಅಲ್ಲ, ತೆಲುಗಿನ ಬಿಗ್ ಬಜೆಟ್‌ನ ಚಿತ್ರವೊಂದು ಪ್ರಮುಖ ದೃಶ್ಯದ ಚಿತ್ರೀಕರಣಕ್ಕಾಗಿ ಸದ್ಯ ಜಲಕ್ಷಾಮ ಎದುರಿಸುತ್ತಿದೆ. ರಾಜಮೌಳಿ ಮತ್ತು ನಟ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಪ್ಯಾನ್ ವರ್ಲ್ಡ್ ‘ವಾರಣಾಸಿ’ ಶೂಟಿಂಗ್ ಸದ್ಯ ಭರ್ಜರಿಯಾಗಿ ಸಾಗಿದೆ. ಈಗಾಗಲೇ ಆಫ್ರಿಕಾ ಸೇರಿ ವಿದೇಶಗಳಲ್ಲಿ ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ಹೈದರಾಬಾದ್‌ನ ರಾಜೇಂದ್ರನಗರದ ಗಗನ್‌ಪಹಾಡ್‌ನಲ್ಲಿ ಅದ್ದೂರಿ ಸೆಟ್ ನಿರ್ಮಿಸಿ, ಚಿತ್ರೀಕರಣದಲ್ಲಿ ನಿರತವಾಗಿದೆ. ಚಿತ್ರತಂಡ ಇದೀಗ ‘ಅಂಡರ್ ವಾಟರ್’ ದೃಶ್ಯದ ಚಿತ್ರೀಕರಣಕ್ಕಾಗಿ ಸಿದ್ಧತೆ ನಡೆಸುತ್ತಿದೆ. 10 ಸಾವಿರ ಲೀಟರ್ ಸಾಮರ್ಥ್ಯವುಳ್ಳ 150ಕ್ಕೂ ಅಧಿಕ ಟ್ಯಾಂಕರ್‌ಗಳು ಅರ್ಥಾತ್ 15 ಲಕ್ಷ ಲೀಟರ್‌ನಷ್ಟು ನೀರಿನ ಅವಶ್ಯಕತೆಯಿದೆ. ಹೀಗಾಗಿ ನಿರ್ಮಾಣ ಸಂಸ್ಥೆಯು ಹೈದರಾಬಾದ್ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೀರು ಪೂರೈಸಲು ಮನವಿ ಮಾಡಿತ್ತು. ಆದರೆ, ಆ ಮನವಿಯನ್ನು ಜಲಮಂಡಳಿ ತಿರಸ್ಕರಿಸಿದೆ. ‘ಸದ್ಯ ಬೇಸಗೆ ಇರುವುದರಿಂದ ಹೈದರಾಬಾದ್ ನಗರದಲ್ಲಿ ನೀರಿನ ಸಮಸ್ಯೆಯಿದೆ. ಜನಸಾಮಾನ್ಯರಿಗೆ ಆದ್ಯತೆ ಮೇರೆಗೆ ನೀರು ಸರಬರಾಜು ಮಾಡುವಾಗ, ಶೂಟಿಂಗ್‌ಗಾಗಿ ದೊಡ್ಡ ಪ್ರಮಾಣದಲ್ಲಿ ನೀರು ಸರಬರಾಜು ಮಾಡಿದರೆ, ಆಕ್ರೋಶ ವ್ಯಕ್ತವಾದೀತು’ ಎಂದು ತಿಳಿಸಿದೆ. ಇದೇ ಮೇ 18ರಿಂದ ಚಿತ್ರತಂಡ ಅಂಡರ್ ವಾಟರ್ ಶೂಟಿಂಗ್‌ಗೆ ಮುಂದಾಗಿತ್ತು. ಅದಕ್ಕಾಗಿ ನಟ ಮಹೇಶ್ ಬಾಬು ಸಿದ್ಧತೆಗಾಗಿ ಜರ್ಮನ್‌ಗೆ ತೆರಳಿದ್ದಾರೆ. ಇದೀಗ ನೀರಿನ ಸಮಸ್ಯೆಯಿಂದಾಗಿ ಶೂಟಿಂಗ್ ಮುಂದೂಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ‘ವಾರಣಾಸಿ’ ಚಿತ್ರದಲ್ಲಿ ಮಹೇಶ್‌ಗೆ ಪ್ರಿಯಾಂಕಾ ಚೋಪ್ರಾ ಜೋಡಿಯಾಗಿದ್ದಾರೆ. ಪೃಥ್ವಿರಾಜ್ ಸುಕುಮಾರ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್