

Psychiatrist : ತನ್ನ ಬಳಿ ಚಿಕಿತ್ಸೆಗಾಗಿ ಬಂದಿದ್ದ ಯುವಕನನ್ನು ಪ್ರೀತಿಸಿ ಮದುವೆಯಾದ 33 ವರ್ಷದ ಮನಶ್ಶಾಸ್ತ್ರಜ್ಞೆ, ಮಾನಸಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿ ನಡೆದಿದೆ.
ಮೃತರನ್ನು ಡಾ. ರಂಜಿತಾ ಎಂದು ಗುರುತಿಸಲಾಗಿದೆ. ಸೈಕಾಲಜಿಯಲ್ಲಿ ಸ್ನಾತಕ್ಕೋತ್ತರ ಪದವಿ ಪಡೆದಿದ್ದ ರಂಜಿತಾ, ಬಂಜಾರ ಹಿಲ್ಸ್‌ನಲ್ಲಿರುವ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ರೋಹಿತ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ರಂಜಿತಾ ಅವರು ಸಮಾಲೋಚನೆ ನೀಡುವಾಗ ತಮ್ಮ ಮಾನಸಿಕ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ರೋಹಿತ್ ಕಂಡರು. ಆಪ್ತ ಸಮಾಲೋಚನೆಗಾಗಿ ಆಗಾಗ ಭೇಟಿ ನೀಡುತ್ತಿದ್ದು ರೋಹಿತ್ ಮತ್ತು ರಂಜಿತಾ ನಡುವೆ ಪ್ರೀತಿ ಚಿಗುರಲು ಶುರುವಾಯಿತು. ಕೊನೆಗೆ ಇಬ್ಬರ ಪ್ರೀತಿ ಆಳವಾಗಿ, ಮದುವೆಯಾಗಲು ನಿರ್ಧಾರ ಮಾಡಿದರು.
ಅವರಿಬ್ಬರು ತಮ್ಮ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹವಾದರು. ಆದರೆ, ಮದುವೆಯ ನಂತರ ರೋಹಿತ್, ರಂಜಿತಾಳನ್ನು ಕೆಲಸಕ್ಕೆ ಹೋಗದಂತೆ ನಿಷೇಧಿಸಿದನು. ಅಲ್ಲದೆ, ಆಕೆಯ ವೈಯಕ್ತಿಕ ಖರ್ಚು ಹೆಚ್ಚಾಗುತ್ತಿದೆ, ಸಂಬಳವನ್ನು ವ್ಯರ್ಥ ಮಾಡುತ್ತಿದ್ದಾಳೆಂದು ಆರೋಪಿಸಿದನು. ಕೆಲಸ ಬಿಟ್ಟು ಮನೆಯಲ್ಲಿ ಸುಮ್ಮನೇ ಇರಲು ರಂಜಿತಾ ಕೈಯಲ್ಲಿ ಸಾಧ್ಯವಾಗಲಿಲ್ಲ. ಹೀಗಾಗಿ, ಹೈದರಾಬಾದ್‌ನ ಪ್ರಸಿದ್ಧ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಕ್ಕಳ ಮನಶ್ಶಾಸ್ತ್ರಜ್ಞೆಯಾಗಿ ಸೇರಿದರು. ಆದರೆ, ಇದು ರೋಹಿತ್ಗೆ ಇಷ್ಟವಾಗಲಿಲ್ಲ. ರಂಜಿತಾಳ ಪೋಷಕರ ಪ್ರಕಾರ, ರೋಹಿತ್, ರಂಜಿತಾಳನ್ನು ದೈಹಿಕವಾಗಿ ಹಿಂಸಿಸಲು ಪ್ರಾರಂಭಿಸಿದನು.
ರೋಹಿತ್ ಮತ್ತು ಆತನ ಕುಟುಂಬದವರು ರಂಜಿತಾ ಬಳಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಮತ್ತು ಹಣ ನೀಡದಿದ್ದರೆ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ರೋಹಿತ್‌ನ ಪಾಲಕರು ಮತ್ತು ಆತನ ಸಹೋದರ ಕಿರುಕುಳ ನೀಡಲು ಪ್ರಾರಂಭಿಸಿದ ಬಳಿಕ, ರಂಜಿತಾ ಮಾನಸಿಕವಾಗಿ ನೊಂದಿದ್ದಳು. ನೋವು ತಾಳಲಾರದೇ ಜುಲೈ 16 ರಂದು ರಂಜಿತಾ, ಅತಿಯಾದ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಳು. ಈ ವೇಳೆ ಆಕೆಗೆ ಸಕಾಲಿಕ ಚಿಕಿತ್ಸೆ ದೊರೆತಿದ್ದರಿಂದ ಆಕೆಯ ಜೀವ ಉಳಿಯಿತು.
ಇದಾದ ಬಳಿಕ ಜುಲೈ 28 ರಂದು ತನ್ನ ಹೆತ್ತವರೊಂದಿಗೆ ಮನೆಗೆ ಮರಳಿದ್ದ ರಂಜಿತಾ, ನಾಲ್ಕು ಅಂತಸ್ತಿನ ಕಟ್ಟಡದ ಸ್ನಾನಗೃಹದ ಕಿಟಕಿಯಿಂದ ಹಾರಿದ್ದಳು. ಈ ವೇಳೆ ಗಂಭೀರ ಗಾಯಗೊಂಡಿದ್ದ ರಂಜಿತಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆ ಮೃತಪಟ್ಟಿರುವುದು ದೃಢಪಟ್ಟಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರೋಹಿತ್ ಮತ್ತು ಆತನ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)