ಆರ್​ಟಿಐ ಅಡಿಯಲ್ಲಿ ಬರಲ್ಲ ಬಿಸಿಸಿಐ: ಸರ್ಕಾರದಿಂದ ಅನುದಾನ ಪಡೆದರಷ್ಟೇ ಅನ್ವಯ! BCCI

BCCI
Published on

BCCI : ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಇತ್ತೀಚೆಗೆ ಸಂಸತ್​ನಲ್ಲಿ ಮಂಡಿಸಿರುವ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಬಹುದೊಡ್ಡ ನಿರಾಳತೆಯೊಂದು ದೊರೆತಿದೆ. ಅದುವೇ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್​ಟಿಐ) ಬಾರದಿರುವುದು.

ಹೌದು, ಸರ್ಕಾರದಿಂದ ಅನುದಾನ ಮತ್ತು ಆರ್ಥಿಕ ನೆರವು ಪಡೆಯುವ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು ಮಾತ್ರ ಆರ್​ಟಿಐ ವ್ಯಾಪ್ತಿಗೆ ಬರಲಿವೆ ಎಂದು ಈ ಮಸೂದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗಾಗಿ ಯಾವುದೇ ಅನುದಾನವನ್ನು ಪಡೆದುಕೊಳ್ಳದ ಬಿಸಿಸಿಐ, ಆರ್​ಟಿಐ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ಮೂಲಕ ಸರ್ಕಾರದ ಸಂಪೂರ್ಣ ಮೂಗುದಾರದಿಂದಲೂ ಬಿಸಿಸಿಐ ತಪ್ಪಿಸಿಕೊಂಡಂತಾಗಿದೆ.

ಜುಲೈ 23ರಂದು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಇದರಲ್ಲಿನ ವಿಧಿ 15(2)ರ ಪ್ರಕಾರ, ಮಾನ್ಯತೆ ಪಡೆದ ಕ್ರೀಡಾ ಸಂಸ್ಥೆಗಳನ್ನು 2005ರ ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕ ಪ್ರಾಧಿಕಾರ ಎಂದು ಪರಿಗಣಿಸಲಾಗುತ್ತದೆ. ಅದರ ಕಾರ್ಯ, ಕರ್ತವ್ಯಗಳು ಮತ್ತು ಅಧಿಕಾರದ ಅನುಷ್ಠಾನಗಳು ಆರ್​ಟಿಐ ಅಡಿಯಲ್ಲಿ ಬರುತ್ತವೆ. ಜತೆಗೆ ಸರ್ಕಾರದ ನೆರವು ನೆಚ್ಚಿಕೊಂಡಿರುವ ಕ್ರೀಡಾ ಸಂಸ್ಥೆಗಳನ್ನು ಮಾತ್ರ ಸಾರ್ವಜನಿಕ ಪ್ರಾಧಿಕಾರ ಎಂದು ಪರಿಗಣಿಸಲಾಗುತ್ತದೆ.

ಎನ್​ಎಸ್​ಎಫ್ ಆಗಬೇಕಿದೆ ಬಿಸಿಸಿಐ

ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯು ಸಂಸತ್​ನ ಉಭಯ ಸದನಗಳಲ್ಲೂ ಅಂಗೀಕಾರಗೊಂಡು, ರಾಷ್ಟ್ರಪತಿ ಸಹಿಯನ್ನೂ ಪಡೆದು ಕಾಯ್ದೆಯಾಗಿ ಬದಲಾದ ನಂತರದಲ್ಲಿ ಬಿಸಿಸಿಐ, ರಾಷ್ಟ್ರೀ ಯ ಕ್ರೀಡಾ ಒಕ್ಕೂಟವಾಗಿ (ಎನ್​ಎಸ್​ಎಫ್) ನೋಂದಣಿ ಆಗಲೇಬೇಕಾಗುತ್ತದೆ. ಯಾಕೆಂದರೆ ಈಗ ಕ್ರಿಕೆಟ್ ಕೂಡ ಒಲಿಂ ಪಿಕ್ ಕ್ರೀಡೆಯಾಗಿದೆ. 2028ರ ಲಾಸ್ ಏಂಜಲಿಸ್ ಒಲಿಂಪಿಕ್ ್ಸಲ್ಲಿ ಟಿ20 ಕ್ರಿಕೆಟ್ ವಿಭಾಗದಲ್ಲಿ ಪದಕ ಸ್ಪರ್ಧೆ ನಡೆಯಲಿದೆ. ಸದ್ಯ ಬಿಸಿಸಿಐ ತಮಿಳು ನಾಡಿನ ಸೊಸೈಟಿ ನೋಂದಣಿ ಕಾಯ್ದೆ 1975ರ ಅಡಿಯಲ್ಲಿ ಸೊಸೈಟಿಯಾಗಿ ನೋಂದಣಿ ಗೊಂಡಿದೆ. ಇದರನ್ವಯ ಬಿಸಿಸಿಐ ಭಾರತದಲ್ಲಿ ಕ್ರಿಕೆಟ್ ಆಟವನ್ನು ನಿಯಂತ್ರಿಸುವ ಸ್ವಾಯತ್ತ ಮತ್ತು ಖಾಸಗಿ ಸಂಸ್ಥೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net