ಲಾಕ್​ ಆಗಿದ್ದ ಮನೆಯ ಬಾಗಿಲು ಮುರಿದು ಫ್ರಿಡ್ಜ್​ ತೆರೆಯುತ್ತಿದ್ದಂತೆ ಬೆಚ್ಚಿಬಿದ್ದ ಪೊಲೀಸರು..!

Hyd Police 1
Published on

ಹೈದರಾಬಾದ್​: ಲಾಕ್​ ಆಗಿದ್ದ ಮನೆಯಿಂದ ಹೊರಬರುತ್ತಿದ್ದ ದುರ್ವಾಸನೆಯಿಂದ ಭಯಗೊಂಡ ಮಾಲೀಕ ಪೊಲೀಸರಿಗೆ ಕರೆ ಮಾಡಿ ತಿಳಿಸಲು, ತಕ್ಷಣ ಮನೆಗೆ ಆಗಮಿಸಿದ ಪೊಲೀಸರು ಬಾಗಿಲು ಮುರಿದು ಒಳಗೆ ನುಗ್ಗಿದಾಗ ಆಘಾತವೊಂದು ಎದುರಾಯಿತು.

ಮನೆಯ ಫ್ರಿಡ್ಜ್​ನಲ್ಲಿ ಇದ್ದ ಶವವನ್ನು ನೋಡಿ ಒಂದು ಕ್ಷಣ ಪೊಲೀಸರೇ ಬೆಚ್ಚಿಬಿದ್ದರು. ಅಂದಹಾಗೆ ಈ ಘಟನೆ ನಡೆದಿದ್ದು ಹೈದರಾಬಾದಿನ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣಾ ವ್ಯಾಪ್ತಿಯ ಕಾರ್ಮಿಕ ನಗರದಲ್ಲಿ. ಮನೆಯ ಮಾಲೀಕ ತನ್ನ ಒಂದು ಮನೆಯನ್ನು ಲೀಸ್​ಗೆಂದು ನೀಡಿದ್ದ. ಆ ಮನೆ ಕಳೆದ ಕೆಲವು ದಿನಗಳಿಂದ ಲಾಕ್​ ಆಗಿತ್ತು. ದಿನ ಕಳೆದಂತೆ ಆ ಮನೆಯಿಂದ ದುರ್ವಾಸನೆ ಬರುವುದನ್ನು ಗಮನಿಸಿದ ಮಾಲೀಕ ಹೆದರಿಗೆ ಪೊಲೀಸರಿಗೆ ಕರೆ ಮಾಡಿದಾಗ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ.

ಮೃತನನ್ನು ಸಿದ್ದಿಖ್​ ಅಹ್ಮದ್​ (38) ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಟೈಲರ್​. ತನ್ನ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ. ಎರಡು ದಿನಗಳ ಹಿಂದೆ ಸಿದ್ದಿಖ್​ ಪತ್ನಿ ತವರು ಮನೆಗೆ ಹೋಗಿದ್ದಳು. ಇದರ ನಡುವೆ ಮನೆಯಿಂದ ಹೊರಬರುತ್ತಿದ್ದ ದುರ್ವಾಸನೆ ನೋಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದಾಗ, ಬಂದು ಸ್ಥಳ ಪರಿಶೀಲನೆ ಮಾಡಿದ ಪೊಲೀಸರಿಗೆ ಮನೆಯ ಫ್ರಿಡ್ಜ್​ನಲ್ಲಿ ಸಿದ್ದಿಖ್​ ಮೃತದೇಹ ಪತ್ತೆಯಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಮೃತನ ಸಾವಿಗೆ ಕಾರಣ ಪತ್ತೆಗೆ ಪ್ರಯತ್ನಿಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ತನಿಖೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಯಾವಾಗ ನಡೆಯಿತು ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕಿದೆ. ಸುಳಿವು ತಂಡ ಸ್ಥಳದಲ್ಲಿ ಕೆಲವು ಆಧಾರಗಳನ್ನು ಸಂಗ್ರಹಿಸಿದ್ದು, ಫ್ರಿಡ್ಜ್​ ಒಳಗೆ ಅರ್ಧ ದೇಹವನ್ನು ಇಡಲಾಗಿತ್ತು ಎಂದು ತಿಳಿದುಬಂದಿದೆ. ಇದು ಕೊಲೆಯೋ? ಅಥವಾ ಏನು ಎಂಬುದನ್ನು ಪತ್ತೆ ಹಚ್ಚುವ ಕೆಲಸಕ್ಕೆ ತನಿಖಾಧಿಕಾರಿಗಳು ಮುಂದಾಗಿದ್ದಾರೆ.

ಗುರುವಾರ ಹೈದರಾಬಾದ್​ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಹಾಡಹಗಲಲ್ಲೇ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಈ ಘಟನೆ ಸೈಬರಬಾದ್​ ಪೊಲೀಸ್​ ಕಮಿಷನರೇಟ್​ ವ್ಯಾಪ್ತಿಯ ಮೈಲಾರದೇವಪಲ್ಲಿಯಲ್ಲೇ ನಡೆದಿದೆ. ಬೈಕ್​ನಲ್ಲಿ ತೆರಳುತ್ತಿದ್ದ ಅಸಾದ್​ ಖಾನ್​ (40) ಎಂಬುವನ ಮೇಲೆ ಕೆಲವು ದುಷ್ಕರ್ಮಿಗಳು ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net