

ಹೈದರಾಬಾದ್: ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಕರೊನಾ ಸೋಂಕು ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ. ಆದರೆ, ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ಕೊಡಲು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಜತೆಗೆ ನರ್ಸ್ಗಳ ಕೊರತೆಯೂ ಉಂಟಾಗುತ್ತಿದೆ. ಸೋಂಕಿಗೆ ಹೆದರಿ ಬಹುತೇಕ ನರ್ಸ್ಗಳು ತವರು ಕೇರಳವನ್ನು ಸೇರಿರುವುದು ಸಮಸ್ಯೆಯನ್ನು ದುಪ್ಪಟ್ಟುಗೊಳಿಸಿದೆ.
ಕರ್ನಾಟಕದಲ್ಲೂ ಕೂಡ ಇದೇ ಪರಿಸ್ಥಿತಿ ಇದ್ದು, ನರ್ಸ್ಗಳನ್ನು ನೇಮಕ ಮಾಡಿಕೊಳ್ಳಲಾಗದೆ ಆಸ್ಪತ್ರೆಗಳು ಪರಿತಪಿಸುತ್ತಿವೆ. ಆದರೆ, ಈ ಸಮಸ್ಯೆಯನ್ನು ನೀಗಿಸಿಕೊಳ್ಳಲು ಹೈದರಾಬಾದ್ನ ಖಾಸಗಿ ಆಸ್ಪತ್ರೆಗಳ ಮಾಲೀಕರು ವಿನೂತನ ಮಾರ್ಗ ಅನುಸರಿಸಲು ಮುಂದಾಗಿದ್ದಾರೆ.
ಹೆಚ್ಚಿನ ವೇತನದ ಆಮಿಷದ ಜತೆಗೆ ಕೇರಳದಿಂದ ಬಾಡಿಗೆ ವಿಮಾನಗಳಲ್ಲಿ ನರ್ಸ್ಗಳನ್ನು ಹೈದರಾಬಾದ್ನ ಖಾಸಗಿ ಆಸ್ಪತ್ರೆಗಳು ಕರೆತರಲಾರಂಭಿಸಿವೆ. ಇತ್ತೀಚೆಗೆ ಬಾಡಿಗೆ ವಿಮಾನದಲ್ಲಿ ತಿರುವನಂತಪುರದಿಂದ 50 ನರ್ಸ್ಗಳನ್ನು ಕರೆತರಲಾಗಿದೆ.
ತೆಲಂಗಾಣದಲ್ಲಿ ಪ್ರತಿದಿನವೂ 1 ಸಾವಿರದಷ್ಟು ಕರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇವರಲ್ಲಿ ಬಹುತೇಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತಾರೆ. ಪರಿಣಾಮ, ಖಾಸಗಿ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿವೆ. ಇವರೆಲ್ಲರಿಗೂ ಸಮರ್ಪಕ ಸೇವೆ ಕೊಡಲು ನರ್ಸ್ಗಳ ಅಗತ್ಯವಿದೆ. ಹಾಗಾಗಿ, 45ರಿಂದ 50 ಸಾವಿರ ರೂಪಾಯಿ ಸಂಬಳ ಕೊಟ್ಟು ಇವರೆಲ್ಲರನ್ನೂ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗುತ್ತಿದೆ ಎಂದು ಕಾರ್ಪೋರೇಟ್ ಆಸ್ಪತ್ರೆಯೊಂದರ ಅಧಿಕಾರಿ ತಿಳಿಸಿದ್ದಾರೆ.
ಅನುಭವದ ಕೊರತೆ: ಐಸಿಯುಗಳಲ್ಲಿ ಕೆಲಸ ಮಾಡುವ ಅನುಭವ ಹೆಚ್ಚಿನ ನರ್ಸ್ಗಳಿಗೆ ಇಲ್ಲ. ಹಾಗಾಗಿ ಅವರು ಕರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಯಾರಾದರೂ ಒಬ್ಬರು ನರ್ಸ್ ಸೋಂಕಿಗೆ ತುತ್ತಾದರು ಎಂದರೆ, ಅವರ ಸಹೋದ್ಯೋಗಿಗಳೆಲ್ಲರೂ ಸ್ವಪ್ರೇರಣೆ ಮೇರೆಗೆ ಕ್ವಾರಂಟೈನ್ಗೆ ಒಳಗಾಗುತ್ತಾರೆ. ಇದು ಕೂಡ ನರ್ಸ್ಗಳ ಕೊರತೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.