3 ದಿನ ಕುಕ್ಕರ್​ನಲ್ಲಿ ಬೇಯಿಸಿದ್ದೆ! ಸತ್ಯ ಬಾಯ್ಬಿಟ್ಟರೂ ಸಿಗ್ತಿಲ್ಲ ಸಾಕ್ಷಿ, 'ಮಿಸ್ಸಿಂಗ್​ ಕೇಸ್'​ನಡಿ ಮುಂದುವರಿದ ಖಾಕಿ ತನಿಖೆ | Hyderabad Horror

ವಿಜಯವಾಣಿ - 2025-01-23T173838.280
Published on

Hyderabad Horror: ಪತ್ನಿಯ ಶೀಲವನ್ನು ಶಂಕಿಸಿದ ನಿವೃತ್ತ ಯೋಧ ಗುರುಮೂರ್ತಿ, ಆಕೆಯನ್ನು ಕ್ರೂರವಾಗಿ ಕೊಲೆಗೈದು, ಮೃತದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ, ಕುಕ್ಕರ್​ನಲ್ಲಿ ಬೇಯಿಸಿ, ಕಡೆಗೆ ಕೆರೆಯಲ್ಲಿ ಬಿಸಾಡಿದ ಬರ್ಬರ ಹತ್ಯೆ ಘಟನೆ ಸದ್ಯ ಪೊಲೀಸರನ್ನೇ ಬೆಚ್ಚಬೀಳಿಸಿದೆ.

ಸ್ಫೋಟಕ ಸತ್ಯ

ಕೊಲೆಯಾದ ಮಹಿಳೆಯನ್ನು ವೆಂಕಟ ಮಾಧವಿ (35) ಎಂದು ಗುರುತಿಸಲಾಗಿದ್ದು, ಗಂಡ ಗುರುಮೂರ್ತಿ ಭೀಕರವಾಗಿ ಹತ್ಯೆಗೈದಿದ್ದಾನೆ. ಕ್ರೈಮ್​ ಆಧರಿತ ಸರಣಿಗಳನ್ನು ನೋಡಿ, ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ ಪತಿ, ತಾನು ಮಾಡುವ ಕೃತ್ಯದ ಬಗ್ಗೆ ಯಾರಿಗೂ ತಿಳಿಯಬಾರದು. ಇದರಲ್ಲಿ ತನ್ನ ಕೈವಾಡವಿರವುದು ಗೊತ್ತಾಗಬಾರದು, ಸುಳಿವು ಮಾತ್ರ ಸಿಗಲೇ ಬಾರದು ಎಂಬ ನಿಟ್ಟಿನಲ್ಲಿ ಮಾಡಿರುವ ಭೀಕರ ಕೊಲೆ ಇದೀಗ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪೊಲೀಸರ ಪ್ರಕಾರ, ಪ್ರಕಾಶಂ ಜಿಲ್ಲೆಯ ಜೆ.ಪಿ. ಚೆರುವುವಿನ ನಿವೃತ್ತ ಯೋಧ ಗುರುಮೂರ್ತಿ ಮತ್ತು ವೆಂಕಟ ಮಾಧವಿ 13 ವರ್ಷಗಳ ಹಿಂದೆ ವಿವಾಹವಾದರು.

ದಂಪತಿಗೆ ಒಬ್ಬ ಮಗಳು ಮತ್ತು ಮಗನಿದ್ದಾನೆ. ಐದು ವರ್ಷಗಳ ಹಿಂದೆ, ಜಿಲ್ಲಾಲಗುಡ ನ್ಯೂ ವೆಂಕಟೇಶ್ವರ ಕಾಲೋನಿಗೆ ತೆರಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಗುರುಮೂರ್ತಿ ಕಾಂಚನ್‌ಬಾಗ್‌ನಲ್ಲಿರುವ ಡಿಆರ್‌ಡಿಒದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಪತ್ನಿಯ ಮೇಲೆ ಗುರುಮೂರ್ತಿಗೆ ತುಂಬಾ ದಿನಗಳಿಂದ ಅನುಮಾನವಿತ್ತು. ಆಕೆಯ ನಡವಳಿಕೆಯಿಂದಾಗಿ ಸಂಶಯ ಮೂಡಿತ್ತು. ಇದರಿಂದ ಇಬ್ಬರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ಹೆಂಡತಿಯ ವರ್ತನೆಯಿಂದ ಬೇಸತ್ತು, ಆಕೆಯನ್ನು ತುಂಡು ತುಂಡಾಗಿ ಕತ್ತರಿಸಿ, ಹತ್ಯೆಗೈದ ಬಗ್ಗೆ ಕಡೆಗೂ ತುಟಿಬಿಚ್ಚಿದ ಗುರುಮೂರ್ತಿ, ಪೊಲೀಸರ ಮುಂದೆ ಘಟನೆಯನ್ನು ಎಳೆ ಎಳೆಯಾಗಿ ವಿವರಿಸಿದ್ದಾನೆ.

ಮೂಳೆ-ಮಾಂಸ ಬೇರ್ಪಡಿಸಿ ಬೇಯಿಸಿದೆ

"ಕೊಲೆಯಲ್ಲಿ ನನ್ನ ಕೈವಾಡ ತಿಳಿಯಬಾರದು ಮತ್ತು ಪೊಲೀಸರಿಗೆ ಯಾವುದೇ ಸುಳಿವು ಸಿಗಬಾರದು ಎಂದು ಆಕೆಯ ದೇಹವನ್ನು ಶೌಚಗೃಹದಲ್ಲಿ ತುಂಡು ತುಂಡಾಗಿ ಕತ್ತರಿಸಿ, ಕುಕ್ಕರ್​ನಲ್ಲಿ ಬೇಯಿಸಿದೆ. ಮೂಳೆ ಮತ್ತು ಮಾಂಸವನ್ನು ಬೇರ್ಪಡಿಸಿದೆ. ನಂತರ ಕುಟ್ಟಾಣಿ ಬಳಸಿ ಮೂಳೆಯನ್ನು ಪುಡಿಮಾಡಿ ಮತ್ತೆ ಕುದಿಸಿದೆ. ಇದೇ ರೀತಿ ಮೂರು ದಿನಗಳ ಕಾಲ ಮೂಳೆ- ಮಾಂಸವನ್ನು ಬೇಯಿಸಿದೆ. ಇದೆಲ್ಲ ಮುಗಿದ ಬಳಿಕ ಅದನ್ನು ಬ್ಯಾಗ್​ನಲ್ಲಿ ಪ್ಯಾಕ್​ ಮಾಡಿಕೊಂಡು ಕೆರೆಯಲ್ಲಿ ಎಸೆದೆ" ಎಂದು ಗುರುಮೂರ್ತಿ ಹೇಳಿರುವುದಾಗಿ ಪೊಲೀಸರ ವರದಿ ಉಲ್ಲೇಖಿಸಿದೆ.

ನಿನ್ನೆ (ಜ.22) ತಡರಾತ್ರಿಯವರೆಗೂ, ಹೆಂಡತಿಯ ದೇಹದ ಭಾಗಗಳನ್ನು ವಿಲೇವಾರಿ ಮಾಡಿದ ಕೆರೆಯಲ್ಲಿ ಸುಳಿವಿಗಾಗಿ ಹುಡುಕಾಡಿದ ಪೊಲೀಸರಿಗೆ ಸದ್ಯ ಯಾವ ಸಾಕ್ಷಿ ಅಥವಾ ಮಾಹಿತಿಯೂ ಲಭಿಸಿಲ್ಲ. ಗುರುಮೂರ್ತಿ ಹೇಳಿರುವ ಕೆರೆಯಲ್ಲಿ ನಿರಂತರವಾಗಿ ಶೋಧಿಸುತ್ತಿರುವ ಖಾಕಿ ಪಡೆಗೆ ಮೃತದೇಹದ ಯಾವ ಭಾಗವನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಹೆಚ್ಚಿನ ಹುಡುಕಾಟಕ್ಕಾಗಿ ಈಗಾಗಲೇ ಹಲವು ತಂಡಗಳು ಮತ್ತು ಶ್ವಾನ ದಳ ಸ್ಥಳದಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಕೊಲೆಗೆ ಸಂಬಂಧಿಸಿದ ಯಾವುದೇ ಪುರಾವೆಗಳು ಇನ್ನೂ ಪತ್ತೆಯಾಗದ ಕಾರಣ, ಈ ಪ್ರಕರಣವನ್ನು ನಾವು ಮಿಸ್ಸಿಂಗ್ ಕೇಸ್​ ಎಂದೇ ಪರಿಗಣಿಸಿ, ತನಿಖೆ ಮುಂದುವರಿಸಿದ್ದೇವೆ" ಎಂದು ಮೀರ್‌ಪೇಟ್ ಎಸ್​ಎಚ್​ಓ ಕೆ. ನಾಗರಾಜು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net