

ಹೈದರಾಬಾದ್: ಬಲಗೈಯಲ್ಲಿ ಮಾಡಿದ ಕಾರ್ಯ ಎಡಗೈಗೆ ತಿಳಿಯಬಾರದು, ಅದೇ ನಿಜವಾದ ಸೇವೆ ಎನ್ನುತ್ತೇವೆ. ಹೈದರಾಬಾದ್‌ನ ಪೊಲೀಸ್ ಇನ್ಸ್‌ಪೆಕ್ಟರ್ ಕೂಡ ಮಾಡಿದ್ದೂ ಅದೇ ಕೆಲಸವನ್ನು. ಆದರೆ ಅವರು ವಾಪಸ್ ತಮ್ಮ ಕಚೇರಿಗೆ ಬರುತ್ತಿದ್ದಂತೆಯೇ ಅವರ ಕೈಯಲ್ಲೊಂದು ಪತ್ರ ಸಿಕ್ಕಿತು, ಅದನ್ನು ನೋಡಿದ ಪಿಎಸ್‌ಐ ತಮ್ಮ ಕಣ್ಣುಗಳನ್ನೇ ನಂಬದಾದರು!
ಹೌದು. ಪತ್ರ ಬಂದದ್ದು ಖುದ್ದು ಮುಖ್ಯಮಂತ್ರಿಗಳಿಂದ! ಅದೂ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳಿಂದ. ಪತ್ರ ನೋಡಿ ಒಮ್ಮೆ ಗಲಿಬಿಲಿಗೊಂಡ ಪಿಎಸ್‌ಐ ಪತ್ರ ತೆರೆದು ನೋಡಿದರೆ ‘ನಿಮಗೆ ಧನ್ಯವಾದ ಹಾಗೂ ಅಭಿನಂದನೆ’ ಎಂದು ಅದರಲ್ಲಿ ಉಲ್ಲೇಖವಾಗಿತ್ತು. ಗುರುತು ಪರಿಚಯವೇ ಇಲ್ಲದ ರೋಗಿಯೊಬ್ಬನ ಪ್ರಾಣ ಉಳಿಸಿದ್ದಕ್ಕೆ ಈ ಧನ್ಯವಾದ ಎಂದು ಅದರಲ್ಲಿ ಹೇಳಲಾಗಿತ್ತು. ಅದನ್ನು ಇನ್ನೂ ಅರಗಿಸಿಕೊಳ್ಳಲಾಗದೇ ಬೆರಗಾಗಿದ್ದ ಪಿಎಸ್‌ಐಗೆ ಸ್ವಲ್ಪ ಹೊತ್ತಿನಲ್ಲಿಯೇ ಹಿಮಾಚಲ ಪ್ರದೇಶದ ರಾಜ್ಯಪಾಲರಿಂದಲೂ ಕರೆ ಬಂತು, ಅವರಿಂದಲೂ ಅಭಿನಂದನೆಯ ಮಾತು!
ಇಂಥದ್ದೊಂದು ಅಪರೂಪದ ಶಹಭಾಸ್‌ಗಿರಿ ಪಡೆದುಕೊಂಡವರು ಹೈದರಾಬಾದ್‌ನ ಬಿ.ಎಲ್ ಲಕ್ಷ್ಮಿನಾರಾಯಣ ರೆಡ್ಡಿ ಎನ್ನುವ ಪಿಎಸ್‌ಐ. ಇವು ಕುಕಟಪಲ್ಲಿ ಠಾಣೆಯ ಅಧಿಕಾರಿ. ಹಿಮಾಚಲ ಪ್ರದೇಶದ ಕುಮಾರ್ ಎಂಬುವವರು ಕ್ರೇನ್ ಆಪರೇಟರ್ ಆಗಿ ಹೈದರಾಬಾದ್‌ನ ಮೆಟ್ರೋ ರೈಲು ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಏ.16ರಂದು ಅವರಿಗೆ ಏಕಾಏಕಿ ಹೊಟ್ಟೆ ನೋವು ಉಂಟಾಗಿ, ಒದ್ದಾಡತೊಡಗಿದರು. ಆ ಸಮಯದಲ್ಲಿ ಕುಕಟಪಲ್ಲಿ ಪೊಲೀಸ್ ಠಾಣೆಗೆ ಕರೆ ಮಾಡಿ ನೋವು ತೋಡಿಕೊಂಡರು.
ಕೂಡಲೇ ಕಾರ್ಯಪ್ರವೃತ್ತರಾದ ಪಿಎಸ್‌ಐ ಬಿ.ಎಲ್ ಲಕ್ಷ್ಮಿನಾರಾಯಣ ರೆಡ್ಡಿ ಅವರು ಸ್ಥಳಕ್ಕೆ ಧಾವಿಸಿದರು. ಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ಅವರಿಗೆ ಅರ್ಜೆಂಟ್ ಆಗಿ ಚಿಕಿತ್ಸೆ ಮಾಡಬೇಕಿದ್ದು 20 ಸಾವಿರ ರೂಪಾಯಿ ಡಿಪಾಸಿಟ್ ಮಾಡಬೇಕಾಗುತ್ತದೆ ಎಂದು ವೈದ್ಯರು ಹೇಳಿದರು. ಹಿಂದೆ ಮುಂದೆ ನೋಡದ ಲಕ್ಷ್ಮಿನಾರಾಯಣ ಅವರು ಹಣವನ್ನು ನೀಡಿದರು. ಚಿಕಿತ್ಸೆ ಯಶಸ್ವಿಯಾಯಿತು.
ಲಾಕ್‌ಡೌನ್‌ನಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ರೀತಿಯ ನೆರವು ನೀಡಿದ ವಿಷಯ, ಕುಮಾರ್ ಅವರ ಮೂಲಕ ಬಾಯಿಯಿಂದ ಬಾಯಿಗೆ ಹೋಗಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹಾಗೂ ರಾಜ್ಯಪಾಲ ಬಂದರು ದತ್ತಾತ್ರೇಯ ಅವರ ಬಳಿಯೂ ತಲುಪಿತು.
ತಮ್ಮ ಪ್ರದೇಶದ ವ್ಯಕ್ತಿಯೊಬ್ಬನಿಗೆ ಈ ರೀತಿ ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದೂ ಅಲ್ಲದೇ, ಹಣವನ್ನೂ ನೀಡಿದ್ದರಿಂದ ಸಂತುಷ್ಟಗೊಂಡ ಅವರು ಶಹಭಾಸ್‌ಗಿರಿ ನೀಡಿದರು. ನಂತರ ಇದೀಗ ಶ್ಲಾಘನೆಗಳ ಮಹಾಪೂರವೇ ಪಿಎಸ್‌ಐಗೆ ಹರಿದು ಬರುತ್ತಿದೆ. (ಏಜೆನ್ಸೀಸ್)