

ಹೈದರಾಬಾದ್: ಕುಡಿಯುವ ನೀರನ್ನು ಕಲುಷಿತಗೊಳಿಸಿದ ಆರೋಪದ ಮೇಲೆ ನೀರಿನ ಟ್ಯಾಂಕರ್ ಚಾಲಕನ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕುಡಿಯುವ ಉದ್ದೇಶಕ್ಕಾಗಿ ಟ್ಯಾಂಕರ್ಗೆ ತುಂಬುತ್ತಿದ್ದ ನೀರಿನಲ್ಲೇ ಕಾಲು ತೊಳೆದ ಚಾಲಕನ ವಿಡಿಯೋ ವೈರಲ್ ಆದ ಬೆನ್ನಲ್ಲೇ ದೂರು ದಾಖಲಿಸಲಾಗಿದೆ. ಘಟನೆಯು ಗುರುವಾರ ಹೈದರಾಬಾದ್ನ ಮೂಸ್ಪೇಟ್ ನೀರು ತುಂಬು ಕೇಂದ್ರದಲ್ಲಿ ನಡೆದಿದೆ. ಈ ಏರಿಯಾ ಕುಕಟಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ.
ವಿಡಿಯೋದಲ್ಲಿ ಏನಿದೆ?: ನೀರು ತುಂಬುವ ಕೇಂದ್ರದ ಮುಂದೆ ಟ್ಯಾಂಕರ್ ನಿಲ್ಲಿಸಿ, ಅದಕ್ಕೆ ಪೈಪ್ ಮೂಲಕ ಕುಡಿಯುವ ನೀರನ್ನು ಭರ್ತಿ ಮಾಡಲಾಗುತ್ತಿರುತ್ತದೆ. ಈ ವೇಳೆ ಟ್ಯಾಂಕರ್ ಚಾಲಕ ತನ್ನ ಬಲಗಾಲನ್ನು ಮೇಲಕ್ಕೆ ಎತ್ತಿ ತನ್ನ ಪಾದಗಳನ್ನು ನೀರಿನಿಂದ ತೊಳೆದುಕೊಳ್ಳುತ್ತಾನೆ.
ಇದೀಗ ವಿಡಿಯೋ ವೈರಲ್ ಆಗಿದ್ದು, ಕುಡಿಯುವ ಉದ್ದೇಶಕ್ಕಾಗಿ ಎಂದು ಗೊತ್ತಿದ್ದರೂ ಕಾಲು ತೊಳೆದ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಚಾಲಕನನ್ನು ವಿಜಯ್ ಎಂದು ಗುರುತಿಸಲಾಗಿದೆ. ಆತ ಗುತ್ತಿಗೆ ನೌಕರನಾಗಿದ್ದು, ಹೈದರಾಬಾದ್ ಮೆಟ್ರೋಪಾಲಿಟನ್ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (ಎಚ್ಎಂಡಬ್ಲ್ಯುಎಸ್ಎಸ್ಬಿ) ಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಚ್ಎಂಡಬ್ಲ್ಯುಎಸ್ಎಸ್ಬಿ, ಚಾಲಕ ವಿಜಯ್ ಖಾಸಗಿ ನೀರಿನ ಟ್ಯಾಂಕರ್ಗೆ ನೀರು ತುಂಬುತ್ತಿದ್ದ. ಆ ವಾಹನ ನಮ್ಮ ಇಲಾಖೆ ಸೇರಿದ್ದಲ್ಲ ಎಂದು ಹೇಳಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಎಂಡಬ್ಲ್ಯುಎಸ್ಎಸ್ಬಿ ಮ್ಯಾನೇಜರ್ ಶ್ರೀನಿವಾಸ್ ರಾವ್ ಕುಕಟಪಲ್ಲಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ. ವಿಡಿಯೋ ಪರಿಶೀಲಿಸಿದ ಬಳಿಕ ವಿಜಯ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 270 (ಜೀವಕ್ಕೆ ಅಪಾಯಕಾರಿಯಾದ ಸೋಂಕು ಹರಡಿಸುವ ರೀತಿಯ ಅಪಾಯಕಾರಿ ವರ್ತನೆ) ಮತ್ತು 427 (ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸುವ ಕೆಲಸ ಪ್ರಗತಿಯಲ್ಲಿದ್ದು, ಆದಷ್ಟು ಬೇಗ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)