

ಧಾರವಾಡ: ಪೊಲೀಸ್ ಠಾಣೆಗೇ 'ಬೇಡಿ' ಹಾಕಿ ಬಾಗಿಲು ಬಂದ್ ಮಾಡಿರುವ ಘಟನೆ ರಾಜ್ಯದಲ್ಲಿ ನಡೆದಿದೆ. ಅಷ್ಟಕ್ಕೂ ಈ 'ಬೇಡಿ'ಯನ್ನು ಹಾಕುವ ದುಸ್ಥಿತಿ ತಂದೊಡ್ಡಿರೋದು ಕೋವಿಡ್ ಸೋಂಕು.
ನಗರದ ಶಹರ ಠಾಣೆಯ ಮಹಿಳಾ ಮುಖ್ಯ ಪೇದೆಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದ್ದು, ಮುಖ್ಯ ದ್ವಾರ ಮುಚ್ಚಲಾಗಿದೆ. ವಿಶೇಷ ಎಂದರೆ, ಈ ದ್ವಾರಕ್ಕೆ ಬೀಗದ ಬಲದು ಬೇಡಿ ಹಾಕಲಾಗಿದೆ. ಇದನ್ನೂ ಓದಿರಿ ಬಸ್ ನಿಲ್ದಾಣದಲ್ಲೇ ಕರೊನಾ ಶಂಕಿತನ ಶವ ಬಿಟ್ಟು ಹೋದರು!
ಕರ್ತವ್ಯನಿರತ ಮಹಿಳಾ ಮುಖ್ಯ ಪೇದೆಗೆ ಇತ್ತೀಚೆಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಠಾಣೆಯ ಒಳ ಮತ್ತು ಹೊರಭಾಗದಲ್ಲಿ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿದೆ.
ಶನಿವಾರ ಮತ್ತಷ್ಟು ಜಾಗೃತರಾಗಿರುವ ಅಧಿಕಾರಿ ಮತ್ತು ಸಿಬ್ಬಂದಿ, ಮುಖ್ಯ ಬಾಗಿಲಿಗೆ ಬೇಡಿ ಹಾಕಿ ಬಂದ್ ಮಾಡಿದರು. ಠಾಣೆಯನ್ನು ತಾತ್ಕಾಲಿಕವಾಗಿ ಎದುರಿನ ಸಂದರ್ಶಕರ ಕೊಠಡಿಗೆ ಸ್ಥಳಾಂತರ ಮಾಡಿ ಕಾರ್ಯ ನಿರ್ವಹಿಸಲಾಗುತ್ತಿದೆ. ಅಪರಾಧಿಗಳ ಕೈಗೆ ಹಾಕುವ ಬೇಡಿಯನ್ನು ಠಾಣೆಯ ಬಾಗಿಲಿಗೆ ಹಾಕಿರುವುದು ಸಾರ್ವಜನಿಕರನ್ನು ಹುಬ್ಬೇರುವಂತೆ ಮಾಡಿದೆ.