

ನಾಪೋಕ್ಲು: ಕ್ರೀಡಾಕೂಟಗಳಿಂದ ಸಮಾಜದ ಸಂಘಟನೆ ಸಾಧ್ಯ ಎಂದು ಬಲಮುರಿ ಗ್ರಾಮದ ದೇವನೂರು ಗೌಡ ಒಕ್ಕೂಟದ ಆಡಳಿತ ಮಂಡಳಿ ಅಧ್ಯಕ್ಷ ಗುಡ್ಡೆ ಮನೆ ರಮೇಶ್ ಹೇಳಿದರು.
ಸಮೀಪದ ಬಲಮುರಿ ಗ್ರಾಮದ ದೇವನೂರು ಗೌಡ ಒಕ್ಕೂಟದ 2024-25ನೇ ಸಾಲಿನ 26ನೇ ವರ್ಷದ ಹುತ್ತರಿ ಊರೋರ್ಮೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ದೇವನೂರು ಗೌಡ ಒಕ್ಕೂಟಸಮಾಜದವರು ಸಂಘಟಿತರಾಗಲು ವೇದಿಕೆ ಅಗತ್ಯ. ಕ್ರೀಡಾಕೂಟಗಳಿಂದ ವಿವಿಧ ಕುಟುಂಬಗಳ ನಡುವೆ ಪರಸ್ಪರ ಬಾಂಧವ್ಯ ವೃದ್ಧಿಯಾಗುತ್ತದೆ. ಭಾಷೆ ,ಸಂಸ್ಕೃತಿಯನ್ನು ಬೆಳೆಸಲು, ಸಮಾಜದ ಸದಸ್ಯರು ಸಂಘಟಿತರಾಗಲು ಕ್ರೀಡಾಕೂಟಗಳು ಸಹಕಾರಿ ಎಂದರು.
ಕ್ರೀಡಾ ಸಮಿತಿ ಅಧ್ಯಕ್ಷ ಗುಡ್ಡೆ ಮನೆ ಚಂದ್ರಶೇಖರ್, ಕಾರ್ಯದರ್ಶಿ ಮೇಡತನ ಹರಿಶ್ಚಂದ್ರ, ನಿರ್ದೇಶಕರಾದ ಪೊನ್ನಚ್ಚನ ಜಯ, ಕುಂದನ ದಯಾನಂದ, ಬಾಕಿಲನ ನಿತ್ಯಾನಂದ, ಗುಡ್ಡ ಮನೆ ಲಕ್ಸು ,ಅಚ್ಚಾಂಡಿರ ಗುರುಪ್ರಸಾದ್, ಚೀಯಪ್ಪನ ದರ್ಶನ್ ಪಾಲ್ಗೊಂಡಿದ್ದರು. ದೇವನೂರು ಗೌಡ ಒಕ್ಕೂಟದ ಕಾರ್ಯದರ್ಶಿ ಚೀಯಪ್ಪನ ವಿನೋದ್, ನಿರ್ದೇಶಕರಾದ ಕುಂದನ ಪ್ರಭಾನಂದ, ಅಚ್ಚಾಂಡಿರ ಸೋಮಣ್ಣ ,ಬಾಕಿಲನ ಪ್ರೇಮ್ ಕುಮಾರ್, ಪೊನ್ನಚ್ಚನ ಅಪ್ಪಾಜಿ, ಗುಡ್ಡ ಮನೆ ಸೋಮಣ್ಣ ಮೇಡತನ ಮೋಹನ್ ವಿಜೇತರಿಗೆ ಬಹುಮಾನ ವಿತರಿಸಿದರು.
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕುಂದನ, ಮೇಡತನ, ಅಚ್ಚಾಂಡಿರ ತಂಡಗಳು ಮೊದಲ ಸ್ಥಾನ ಗಳಿಸಿದವು. ಗುಡ್ಡೆ ಮನೆ ತಂಡ ದ್ವಿತೀಯ ಸ್ಥಾನ ಗಳಿಸಿತು. ರಿಲೇ ಸ್ಪರ್ಧೆಯಲ್ಲಿ ಗುಡ್ಡೆಮನೆ ತಂಡ ಪ್ರಥಮ ಸ್ಥಾನ ಗಳಿಸಿದರೆ, ಕುಂದನ ತಂಡ ದ್ವಿತೀಯ ಸ್ಥಾನ ಗಳಿಸಿತು. ವಿಜೇತರಿಗೆ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ವಿತರಿಸಲಾಯಿತು.
ಆರಂಭದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಕ್ರೀಡಾಕೂಟ ಉದ್ಘಾಟಿಸಲಾಯಿತು. ಹಗ್ಗಜಗ್ಗಾಟ , ಭಾರದ ಕಲ್ಲು ಎಸೆತ, ಓಟದ ಸ್ಪರ್ಧೆಗಳು ಸೇರಿದಂತೆ ವಿವಿಧ ಆಟೋಟಗಳನ್ನು ಆಯೋಜಿಸಲಾಗಿತ್ತು.